- 1 ಇದಾದ ಮೇಲೆ ಆತನು ಗೆನೇಜರೆತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ ಜನರು ದೇವರ ವಾಕ್ಯವನ್ನು ಕೇಳುವದಕ್ಕಾಗಿ ಆತನ ಮೇಲೆ ನೂಕಾಡುತ್ತಿದ್ದರು.
- 2 ಆಗ ಆತನು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡನು; ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.
- 3 ಆಗ ಅವುಗಳಲ್ಲಿ ಸೀಮೋನನದಾಗಿದ್ದ ದೋಣಿಯನ್ನು ಆತನು ಹತ್ತಿದ ಮೇಲೆ ಅದನ್ನು ಭೂಮಿಯಿಂದ ಸ್ವಲ್ಪ ನೂಕ ಬೇಕೆಂದು ಅವನನ್ನು ಕೇಳಿಕೊಂಡನು. ಆತನು ಕೂತುಕೊಂಡು ದೋಣಿಯೊಳಗಿಂದ ಜನರಿಗೆ ಬೋಧಿಸಿದನು.
- 4 ಆತನು ಮಾತನಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ--(ದೋಣಿಯನ್ನು) ಆಳವಾದ ಸ್ಥಳಕ್ಕೆ ನಡಿಸಿ ವಿಾನು ಹಿಡಿಯುವದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ ಎಂದು ಹೇಳಿದನು.
- 5 ಅದಕ್ಕೆ ಪ್ರತ್ಯುತ್ತರವಾಗಿ ಸೀಮೋನನು ಆತನಿಗೆ--ಗುರುವೇ, ನಾವು ರಾತ್ರಿ ಯೆಲ್ಲಾ ಪ್ರಯಾಸಪಟ್ಟೆವು. ಆದರೆ ಏನೂ ಸಿಕ್ಕಲಿಲ್ಲ; ಆದಾಗ್ಯೂ ನಿನ್ನ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ ಎಂದು ಹೇಳಿದನು.
- 6 ಅವರು ಅದರಂತೆ ಮಾಡಿ ವಿಾನಿನ ದೊಡ್ಡ ರಾಶಿಯನ್ನು ಹಿಡಿದರು. ಅವರ ಬಲೆಯು ಹರಿಯಿತು.
- 7 ಆಗ ಬೇರೆ ದೋಣಿ ಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆ ಮಾಡಿದರು; ಮತ್ತು ಅವರು ಬಂದು ಎರಡು ದೋಣಿಗಳನ್ನು ತುಂಬಿ ಸಲಾಗಿ ಅವು ಮುಳುಗಲಾರಂಭಿಸಿದವು.
- 8 ಸೀಮೋನ್ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.
- 9 ಯಾಕಂದರೆ ಅವರು ಹಿಡಿದ ವಿಾನುಗಳ ರಾಶಿಗಾಗಿ ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.
- 10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆಯೇ ವಿಸ್ಮಯ ಪಟ್ಟರು. ಆಗ ಯೇಸು ಸೀಮೋನನಿಗೆ--ಹೆದರಬೇಡ. ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವಿ ಅಂದನು.
- 11 ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದಾಗ ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
- 12 ತರುವಾಯ ಆತನು ಒಂದಾನೊಂದು ಪಟ್ಟಣ ದಲ್ಲಿದ್ದಾಗ ಇಗೋ, ತುಂಬಾ ಕುಷ್ಠವಿದ್ದ ಒಬ್ಬ ಮನುಷ್ಯನು ಯೇಸುವನ್ನು ನೋಡಿ ಬೋರಲ ಬಿದ್ದು ಆತನಿಗೆ--ಕರ್ತನೇ, ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಆತನನ್ನು ಬೇಡಿಕೊಂಡನು.
- 13 ಆತನು ತನ್ನ ಕೈಚಾಚಿ ಅವನನ್ನು ಮುಟ್ಟಿ ಅವ ನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು. ಕೂಡಲೆ ಆ ಕುಷ್ಠವು ಅವನಿಂದ ಹೊರಟುಹೋಯಿತು.
- 14 ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು.
- 15 ಆದರೂ ಆತನ ಕೀರ್ತಿಯು ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು; ದೊಡ್ಡ ಸಮೂಹಗಳು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ರೋಗಗಳನ್ನು ಆತನಿಂದ ವಾಸಿಮಾಡಿಸಿಕೊಳ್ಳು ವದಕ್ಕೂ ಕೂಡಿ ಬಂದರು.
- 16 ಆತನಾದರೋ ತನ್ನನ್ನು ಪ್ರತ್ಯೇಕಿಸಿಕೊಂಡು ಅರಣ್ಯಕ್ಕೆ ಹೋಗಿ ಪ್ರಾರ್ಥಿಸಿದನು.
- 17 ಇದಾದ ಮೇಲೆ ಒಂದಾನೊಂದು ದಿನ ಆತನು ಬೋಧಿಸುತ್ತಿದ್ದಾಗ ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನ್ಯಾಯಪ್ರಮಾಣದ ಪಂಡಿತರೂ ಅಲ್ಲಿ ಕೂತುಕೊಂಡಿದ್ದರು. ಕರ್ತನ ಶಕ್ತಿಯು ಅವರನ್ನು ಸ್ವಸ್ಥ ಮಾಡುವದಕ್ಕೆ ಸಿದ್ಧವಿತ್ತು.
- 18 ಆಗ ಇಗೋ, ಪಾರ್ಶ್ವವಾಯು ರೋಗವಿದ್ದ ಒಬ್ಬ ಮನುಷ್ಯನನ್ನು ಕೆಲವರು ಹಾಸಿಗೆಯಲ್ಲಿ ಹೊತ್ತು ಕೊಂಡು ಬಂದು ಅವನನ್ನು ಒಳಗೆ ಆತನ ಎದುರಿಗೆ ತರುವ ವಿಧಾನವನ್ನು ಹುಡುಕಿದರು.
- 19 ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ ಮನೆಯಮೇಲೆ ಹೋಗಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ನಡುವೆ ಯೇಸುವಿನ ಮುಂದೆ ಇಳಿಸಿದರು.
- 20 ಆಗ ಆತನು ಅವರ ನಂಬಿಕೆಯನ್ನು ನೋಡಿ ಅವನಿಗೆ-- ಮನುಷ್ಯನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.
- 21 ಆಗ ಶಾಸ್ತ್ರಿಗಳೂ ಫರಿ ಸಾಯರೂ--ದೇವದೂಷಣೆಗಳನ್ನು ಮಾಡುವದಕ್ಕೆ ಇವನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು ಎಂದು ತಮ್ಮಲ್ಲಿ ಮಾತನಾಡಿಕೊಂಡರು.
- 22 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು ಪ್ರತ್ಯುತ್ತರವಾಗಿ ಅವರಿಗೆ--ನೀವು ನಿಮ್ಮ ಹೃದಯಗಳಲ್ಲಿ ಅಂದು ಕೊಳ್ಳುತ್ತಿರುವದೇನು?
- 23 ಯಾವದು ಸುಲಭ-- ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಡೆ ಅನ್ನುವದೋ?
- 24 ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸುವದಕ್ಕೆ ಭೂಮಿಯ ಮೇಲೆ ಅಧಿಕಾರವುಂಟೆಂದು ನೀವು ತಿಳಿಯಬೇಕು (ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ)--ಎದ್ದು ನಿನ್ನ ಹಾಸಿಗೆಯನ್ನು ತಕ್ಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
- 25 ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ತನ್ನ ಸ್ವಂತ ಮನೆಗೆ ಹೊರಟುಹೋದನು.
- 26 ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು.
- 27 ಇವುಗಳಾದ ಮೇಲೆ ಆತನು ಮುಂದೆ ಹೋಗಿ ತೆರಿಗೆಯ ಕಚೇರಿಯಲ್ಲಿ ಕೂತುಕೊಂಡಿದ್ದ ಲೇವಿಯ ನೆಂಬ ಹೆಸರುಳ್ಳ ಒಬ್ಬ ಸುಂಕದವನನ್ನು ನೋಡಿ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
- 28 ಅವನು ಎಲ್ಲವನ್ನು ಬಿಟ್ಟು ಎದ್ದು ಆತನನ್ನು ಹಿಂಬಾಲಿಸಿದನು.
- 29 ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಆತನಿಗೆ ದೊಡ್ಡ ಔತಣವನ್ನು ಮಾಡಿಸಲು ಸುಂಕದವರು ಮತ್ತು ಬೇರೆ ಬಹಳ ಜನರು ಅವರೊಂದಿಗೆ ಕೂತುಕೊಂಡರು.
- 30 ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
- 31 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕ್ಷೇಮದಲ್ಲಿ ಇರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವರಿಗೆ ವೈದ್ಯನು ಬೇಕು.
- 32 ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕೆ ಕರೆಯುವದಕ್ಕಾಗಿ ಬಂದೆನು ಎಂದು ಹೇಳಿದನು.
- 33 ಅವರು ಆತನಿಗೆ--ಯೋಹಾನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ; ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನವರು ಯಾಕೆ ತಿಂದು ಕುಡಿಯುತ್ತಾರೆ ಎಂದು ಹೇಳಿದರು.
- 34 ಆತನು ಅವರಿಗೆ--ಮದುಮಗನು ಮದುವೆ ಮನೆಯ ಮಕ್ಕಳ ಜೊತೆಯಲ್ಲಿ ಇರುವಾಗ ಅವರಿಗೆ ಉಪವಾಸ ಮಾಡಿಸುವಂತೆ ನಿಮ್ಮಿಂದಾದೀತೇ?
- 35 ಆದರೆ ಮದುಮಗನು ಅವ ರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು ಎಂದು ಹೇಳಿದನು.
- 36 ಆತನು ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದ್ದೇನಂದರೆ--ಹಳೇ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಯಾರೂ ಹಚ್ಚುವದಿಲ್ಲ; ಹಚ್ಚಿದರೆ ಹೊಸದು ಹರಿದು ಹೋಗುವದು ಮತ್ತು ಹೊಸದರಿಂದ ತೆಗೆದ ತುಂಡು ಹಳೇದರೊಂದಿಗೆ ಸರಿಬೀಳುವದಿಲ್ಲ.
- 37 ಯಾರೂ ಹಳೇಬುದ್ದಲಿಗಳಲ್ಲಿ ಹೊಸದ್ರಾಕ್ಷಾರಸವನ್ನು ಹಾಕುವದಿಲ್ಲ; ಹಾಕಿದರೆ ಹೊಸದ್ರಾಕ್ಷಾರಸವು ಬುದ್ದಲಿಗಳನ್ನು ಒಡೆಯುವದ ರಿಂದ ಅದು ಚೆಲ್ಲಿ ಹೋಗುವದು ಮತ್ತು ಬುದ್ದಲಿಗಳು ಹಾಳಾಗಿ ಹೋಗುವವು.
- 38 ಆದರೆ ಹೊಸದ್ರಾಕ್ಷಾ ರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು; ಹೀಗೆ ಅವೆರಡೂ ಭದ್ರವಾಗಿರುವವು.
- 39 ಯಾವನಾದರೂ ಹಳೇದ್ರಾಕ್ಷಾರಸವನ್ನು ಕುಡಿದ ಕೂಡಲೆ ಹೊಸದನ್ನು ಅಪೇಕ್ಷಿಸುವದಿಲ್ಲ; ಯಾಕಂದರೆ ಅವನು--ಹಳೇದೇ ಉತ್ತಮ ಅನ್ನುವನು.
Luke 05
- Details
- Parent Category: New Testament
- Category: Luke
ಲೂಕನು ಅಧ್ಯಾಯ 5