- 1 ಶೆಬದ ರಾಣಿಯು ಕರ್ತನ ನಾಮವನ್ನು ಕುರಿತೂ ಸೊಲೊಮೋನನ ಕೀರ್ತಿ ಯನ್ನೂ ಕೇಳಿದಾಗ ಒಗಟುಗಳಿಂದ ಅವನನ್ನು ಪರೀಕ್ಷಿ ಸಲು ಬಂದಳು.
- 2 ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ ಬಹು ಹೆಚ್ಚಾದ ಚಿನ್ನವನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಹೊರುವ ಒಂಟೆಗಳ ಸಂಗಡ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು.
- 3 ಆಗ ಸೊಲೊ ಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಅವಳಿಗೆ ತಿಳಿಸದಂಥ ಅರಸನಿಗೆ ಮರೆಯಾಗಿದ್ದಂಥದ್ದು ಒಂದೂ ಇರಲಿಲ್ಲ.
- 4 ಶೆಬದ ರಾಣಿಯು ಸೊಲೊ ಮೋನನ ಸಮಸ್ತ ಜ್ಞಾನವನ್ನೂ ಅವನು ಕಟ್ಟಿಸಿದ ಮಂದಿರವನ್ನೂ
- 5 ಅವನ ಮೇಜಿನ ಭೋಜನವನ್ನೂ ದಾಸರ ಕೂತಿರುವಿಕೆಯ ರೀತಿಯನ್ನೂ ಸೇವಕರು ನಿಂತಿರುವದನ್ನೂ ಅವರ ವಸ್ತ್ರಗಳನ್ನೂ ಅವನ ಪಾನ ದಾಯಕರನ್ನೂ ಅವನು ಕರ್ತನ ಮಂದಿರಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಸ್ತಬ್ಧಳಾದಳು; ಅವಳು ಅರಸನಿಗೆ--
- 6 ನಾನು ನನ್ನ ದೇಶದಲ್ಲಿ ನಿನ್ನ ಕ್ರಿಯೆ ಗಳನ್ನು ಕುರಿತೂ ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯವು.
- 7 ಆದರೆ ನಾನು ಬಂದು ನನ್ನ ಕಣ್ಣು ಗಳಿಂದ ನೋಡುವವರೆಗೂ ಆ ಮಾತುಗಳನ್ನು ನಂಬದೆ ಹೋದೆನು. ಇಗೋ, ಇದರಲ್ಲಿ ಅರ್ಧವೂ ನನಗೆ ಹೇಳಲ್ಪಟ್ಟಿದ್ದಿಲ್ಲ; ನಿನ್ನ ಜ್ಞಾನವೂ ಸಂಪತ್ತೂ ನಾನು ಕೇಳಿದ ಕೀರ್ತಿಗಿಂತ ಅಧಿಕವಾಗಿರುವದು.
- 8 ನಿನ್ನ ಮನುಷ್ಯರು ಭಾಗ್ಯವಂತರು; ನಿನ್ನ ಮುಂದೆ ಯಾವಾ ಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಸೇವಕರು ಭಾಗ್ಯವಂತರು.
- 9 ನಿನ್ನನ್ನು ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂಡ್ರಿಸುವ ಹಾಗೆ ನಿನ್ನಲ್ಲಿ ಇಷ್ಟಪಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ. ಕರ್ತನು ಯುಗಯುಗಕ್ಕೂ ಇಸ್ರಾಯೇಲನ್ನು ಪ್ರೀತಿ ಮಾಡಿದ್ದರಿಂದ ನ್ಯಾಯವನ್ನೂ ನೀತಿಯನ್ನೂ ನಡಿಸಲು ಆತನು ನಿನ್ನನ್ನು ಅರಸನಾಗ ಮಾಡಿದನು ಅಂದಳು.
- 10 ಅವಳು ಅರಸನಿಗೆ ನೂರ ಇಪ್ಪತ್ತು ತಲಾಂತು ಚಿನ್ನವನ್ನೂ ಬಹುಸಮೃದ್ಧಿಯಾದ ಸುಗಂಧದ್ರವ್ಯಗ ಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಅಪರಿಮಿತವಾದ ಸುಗಂಧಗಳ ಹಾಗೆ ಇನ್ನೆಂದೂ ಬಂದದ್ದಿಲ್ಲ.
- 11 ಇದಲ್ಲದೆ ಹೀರಾಮನ ಹಡಗುಗಳು ಓಫಿರಿನಿಂದ ಬಂಗಾರವನ್ನೂ ಅನೇಕ ಅಲ್ಮುಗ್ ಮರಗಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ತಂದವು.
- 12 ಅರಸನು ಅಲ್ಮುಗ್ ಮರಗಳಿಂದ ಕರ್ತನ ಮಂದಿರಕ್ಕೋಸ್ಕರವೂ ಅರಸನ ಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿ ದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ ವೀಣೆಗಳನ್ನೂ ಮಾಡಿಸಿದನು; ಅಂದಿ ನಿಂದ ಈ ದಿನದ ವರೆಗೂ ಅಂಥ ಅಲ್ಮುಗ್ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ.
- 13 ಅರಸನಾದ ಸೊಲೊಮೋನನು ಶೆಬದ ರಾಣಿಗೆ ರಾಜನ ದಾನವಾಗಿ ಕೊಟ್ಟದ್ದು ಹೊರತಾಗಿ ಅವಳು ಇಚ್ಚೈಸಿ ಕೇಳಿದ್ದನ್ನೆಲ್ಲಾ ಸೊಲೊಮೋನನು ಅವಳಿಗೆ ಕೊಟ್ಟನು. ಆಕೆಯು ಹಿಂತಿರುಗಿ ತನ್ನ ಸೇವಕರ ಕೂಡ ತನ್ನ ಸ್ವದೇಶಕ್ಕೆ ಹೋದಳು.
- 14 ಆದರೆ ವರ್ತಕರಿಂದಲೂ ವರ್ತಕರ ವ್ಯಾಪಾರ ದಿಂದಲೂ ಅರಬ್ಬಿಯ ಅರಸುಗಳಿಂದಲೂ ದೇಶದ ಅಧಿಪತಿಗಳಿಂದಲೂ ಬಂದ ಬಂಗಾರದ ಹೊರತಾಗಿ
- 15 ಒಂದೇ ವರುಷದಲ್ಲಿ ಸೊಲೊಮೋನನಿಗೆ ಬಂದ ಬಂಗಾರವು ಆರು ನೂರ ಅರುವತ್ತಾರು ತಲಾಂತು ತೂಕವಾಗಿತ್ತು.
- 16 ಅರಸನಾದ ಸೊಲೊಮೋನನು ಬಂಗಾರದಿಂದ ಇನ್ನೂರು ಖೇಡ್ಯಗಳನ್ನು ಮಾಡಿಸಿ ದನು. ಒಂದೊಂದೂ ಖೇಢ್ಯಕ್ಕೆ ಆರುನೂರು ಶೆಕೇಲು ತೂಕ ಬಂಗಾರವಿತ್ತು.
- 17 ಹಾಗೆಯೇ ಬಂಗಾರದಿಂದ ಮುನ್ನೂರು ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿಗೆ ನೂರೈವತ್ತು ತೊಲೆ ಬಂಗಾರವಿತ್ತು. ಅರಸನು ಇವುಗಳನ್ನು ಲೆಬನೋನಿನ ಅಡವಿಯ ಮನೆಯಲ್ಲಿ ಇಟ್ಟನು.
- 18 ಇದಲ್ಲದೆ ಅರಸನು ದಂತದಿಂದ ದೊಡ್ಡ ಸಿಂಹಾ ಸನವನ್ನು ಮಾಡಿಸಿ ಅದನ್ನು ಶ್ರೇಷ್ಠ ಬಂಗಾರದಿಂದ ಹೊದಿಸಿದನು.
- 19 ಈ ಸಿಂಹಾಸನಕ್ಕೆ ಆರು ಮೆಟ್ಲುಗ ಳಿದ್ದವು. ಈ ಸಿಂಹಾಸನದ ಹಿಂಭಾಗವು ದುಂಡಾಗಿತ್ತು. ಕುಳಿತುಕೊಳ್ಳುವ ಸ್ಥಳದ ಎರಡು ಪಾರ್ಶ್ವಗಳಲ್ಲಿ ಕೈಗಳಿ ದ್ದವು. ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.
- 20 ಹನ್ನೆರಡು ಸಿಂಹಗಳು ಆರು ಮೆಟ್ಟಲುಗಳ ಮೇಲೆ ಎರಡು ಪಾರ್ಶ್ವಗಳಲ್ಲಿ ನಿಂತಿದ್ದವು. ಯಾವ ರಾಜ್ಯದಲ್ಲಿಯೂ ಅಂಥದ್ದು ಇದ್ದದ್ದಿಲ್ಲ.
- 21 ಇದಲ್ಲದೆ ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆ ಗಳೆಲ್ಲಾ ಬಂಗಾರದವುಗಳಾಗಿದ್ದವು. ಲೆಬನೋನಿನ ಅಡವಿಯ ಮನೆಯ ಪಾತ್ರೆಗಳೆಲ್ಲಾ ಹಾಗೆಯೇ ಬಂಗಾ ರದವುಗಳಾಗಿದ್ದವು. ಬೆಳ್ಳಿಯದು ಯಾವದೂ ಇರಲಿಲ್ಲ. ಯಾಕಂದರೆ ಸೊಲೊಮೋನನ ದಿವಸಗಳಲ್ಲಿ ಅದು ಏನೂ ಇಲ್ಲದ್ದಾಗಿ ಎಣಿಸಲ್ಪಟ್ಟಿತ್ತು.
- 22 ಅರಸನಿಗೆ ತಾರ್ಷೀ ಷಿನ ಹಡಗುಗಳು ಹೀರಾಮನ ಹಡಗುಗಳ ಸಂಗಡ ಸಮುದ್ರದಲ್ಲಿ ಇದ್ದವು. ಮೂರು ವರುಷಕ್ಕೆ ಒಂದು ಸಾರಿ ತಾರ್ಷೀಷಿನ ಹಡಗುಗಳು ಬೆಳ್ಳಿಬಂಗಾರ ವನ್ನೂ ದಂತವನ್ನೂ ಕೋತಿಗಳನ್ನೂ ನವಿಲುಗಳನ್ನೂ ತಕ್ಕೊಂಡು ಬರುತ್ತಿದ್ದವು.
- 23 ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಿಂದಲೂ ಜ್ಞಾನ ದಿಂದಲೂ ಭೂಲೋಕದ ಸಮಸ್ತ ಅರಸುಗಳಿಗಿಂತ ದೊಡ್ಡವನಾಗಿದ್ದನು.
- 24 ದೇವರು ಸೊಲೊಮೋನನ ಹೃದಯದಲ್ಲಿ ಉಂಟು ಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯಲ್ಲಿರುವ ಸಮಸ್ತರು ಅವನ ಬಳಿಗೆ ಬಂದರು.
- 25 ಅವರವರು ಕಾಣಿಕೆಯಾಗಿ ಬೆಳ್ಳಿ ಬಂಗಾರದ ಪಾತ್ರೆಗಳನ್ನೂ ವಸ್ತ್ರಗಳನ್ನೂ ಆಯುಧ ಗಳನ್ನೂ ಸುಗಂಧಗಳನ್ನೂ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ವರುಷ ವರುಷಕ್ಕೂ ನೇಮಕದ ಪ್ರಕಾರ ತರುತ್ತಾ ಇದ್ದರು.
- 26 ಇದಲ್ಲದೆ ಸೊಲೊಮೋನನು ರಥಗಳನ್ನೂ ರಾಹುತರನ್ನೂ ಕೂಡಿಸಿದನು. ಅವನಿಗೆ ಸಾವಿರದ ನಾನೂರು ರಥಗಳೂ ಪಟ್ಟಣಗಳಲ್ಲಿಯೂ ಅರಸನ ಬಳಿಯಲ್ಲಿ ಯೆರೂಸಲೇಮಿನಲ್ಲಿಯೂ ತಾನು ಇರಿಸಿದ ಹನ್ನೆರಡು ಸಾವಿರ ಕುದುರೆಯ ರಾಹುತರೂ ಇದ್ದರು.
- 27 ಅರಸನು ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳ ಹಾಗೆಯೂ ದೇವದಾರುಗಳನ್ನು ತಗ್ಗಿನಲ್ಲಿರುವ ಆಲದ ಮರಗಳ ಹಾಗೆಯೂ ಬಹಳವಾಗಿ ಮಾಡಿ ದನು.
- 28 ಇದಲ್ಲದೆ ಸೊಲೊಮೋನನಿಗೆ ಐಗುಪ್ತ ದಿಂದ ಕುದುರೆಗಳೂ ಸಣಬಿನ ನೂಲು ತರಲ್ಪಟ್ಟವು. ಅರಸನ ವರ್ತಕರು ಕ್ರಯಕ್ಕೆ ಸಣಬಿನ ನೂಲನ್ನು ತೆಗೆದುಕೊಂಡರು.
- 29 ಐಗುಪ್ತದಿಂದ ಹೊರಟುಬರುವ ರಥದ ಕ್ರಯವು ಆರು ನೂರು ಬೆಳ್ಳಿ ಶೆಕೇಲುಗಳು, ಕುದುರೆಯ ಕ್ರಯವು ನೂರ ಐವತ್ತು ಬೆಳ್ಳಿ ಶೆಕೇಲುಗಳು. ಈ ಪ್ರಕಾರ ಹಿತ್ತಿಯರ ಅರಸುಗಳೆಲ್ಲರಿಗೂ ಅರಾಮ್ಯದ ಅರಸುಗಳಿಗೂ ಅವರ ಮುಖಾಂತರ ತಕ್ಕೊಂಡು ಬರುತ್ತಿದ್ದರು.
1 Kings 10
- Details
- Parent Category: Old Testament
- Category: 1 Kings
1 ಅರಸುಗಳು ಅಧ್ಯಾಯ 10