- 1 ಆದರೆ ಬೆನ್ಯಾವಿಾನನ ವಂಶದವನಾದ ಕೀಷನೆಂಬ ಒಬ್ಬ ಮನುಷ್ಯನಿದ್ದನು. ಇವನು ಅಬೀಯೇಲನ ಮಗನು, ಇವನು ಚೆರೋರನ ಮಗನು, ಇವನು ಬೆಕೋರತನ ಮಗನು, ಇವನು ಅಫೀಹನ ಮಗನು ಇವನು ಪರಾಕ್ರಮಶಾಲಿಯಾಗಿ ದ್ದನು.
- 2 ಇವನಿಗೆ ಒಳ್ಳೇ ಯೌವನಸ್ಥ ನಾದ ಸೌಲನೆಂಬ ಹೆಸರುಳ್ಳ ಒಬ್ಬ ಸುಂದರನಾದ ಮಗನಿದ್ದನು. ಇಸ್ರಾ ಯೇಲ್ ಮಕ್ಕಳಲ್ಲಿ ಅವನಿಗಿಂತ ಸೌಂದರ್ಯವುಳ್ಳವನು ಒಬ್ಬನೂ ಇರಲಿಲ್ಲ. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾದವನಾಗಿದ್ದನು.
- 3 ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆ ಹೋದದರಿಂದ ಅವನು ತನ್ನ ಮಗನಾದ ಸೌಲ ನಿಗೆ--ನೀನೆದ್ದು ಕೆಲಸದವರಲ್ಲಿ ಒಬ್ಬನನ್ನು ನಿನ್ನ ಸಂಗಡ ಕರಕೊಂಡು ಕತ್ತೆಗಳನ್ನು ಹುಡುಕಲು ಹೋಗಬೇಕು ಅಂದನು.
- 4 ಹಾಗೆಯೇ ಅವನು ಎಫ್ರಾಯಾಮ್ ಬೆಟ್ಟವನ್ನೂ ಶಾಲೀಷಾ ದೇಶವನ್ನೂ ದಾಟಿಹೋದನು; ಆದರೆ ಅವು ಸಿಕ್ಕಲಿಲ್ಲ. ಅವನು ಶಾಲೀಮ್ ದೇಶವನ್ನು ಹಾದುಹೋದನು; ಅಲ್ಲಿಯೂ ಅವುಗಳು ಇಲ್ಲದೆ ಹೋದವು. ಅವನು ಬೆನ್ಯಾವಿಾನನ ದೇಶವನ್ನು ದಾಟಿ ದರೂ ಅವುಗಳನ್ನು ಕಾಣದೆ ಹೋದನು.
- 5 ಅವರು ಚೂಫ್ ಎಂಬ ದೇಶಕ್ಕೆ ಬಂದಾಗ ಸೌಲನು ತನ್ನ ಸಂಗಡ ಇದ್ದ ಸೇವಕನಿಗೆ--ನನ್ನ ತಂದೆಯು ಕತ್ತೆಗಳ ಮೇಲೆ ಇರುವ ಚಿಂತೆಯನ್ನು ಬಿಟ್ಟು ನಮಗೋಸ್ಕರ ಚಿಂತೆಪಡದ ಹಾಗೆ ನಾವು ಹಿಂದಕ್ಕೆ ಹೋಗೋಣ ಬಾ ಅಂದನು.
- 6 ಅದಕ್ಕವನು--ಇಗೋ, ಈ ಪಟ್ಟಣ ದಲ್ಲಿ ದೇವರ ಮನುಷ್ಯನೊಬ್ಬನಿದ್ದಾನೆ; ಅವನು ಗೌರವ ವುಳ್ಳ ಮನುಷ್ಯನು. ಅವನು ಹೇಳುವದೆಲ್ಲಾ ನಿಶ್ಚಯ ವಾಗಿ ಆಗುವದು. ಈಗ ನಾವು ಅಲ್ಲಿಗೆ ಹೋಗೋಣ; ಒಂದು ವೇಳೆ, ನಾವು ಹೋಗಬೇಕೆಂದಿರುವ ನಮ್ಮ ಮಾರ್ಗವನ್ನು ಅವನು ತಿಳಿಸುವನು ಅಂದನು.
- 7 ಆಗ ಸೌಲನು ತನ್ನ ಸೇವಕನಿಗೆ--ಇಗೋ, ನಾವು ಆ ಮನುಷ್ಯನ ಬಳಿಗೆ ಹೋದರೆ ಏನು ತಕ್ಕೊಂಡು ಹೋಗುವದು? ಯಾಕಂದರೆ ನಮ್ಮ ಹಸಿಬೆಗಳಲ್ಲಿ ಇರುವ ರೊಟ್ಟಿ ಮುಗಿದುಹೋಯಿತು. ದೇವರ ಮನುಷ್ಯನ ಬಳಿಗೆ ತಕ್ಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ; ನಮ್ಮ ಬಳಿಯಲ್ಲಿ ಏನದೆ ಅಂದನು.
- 8 ಅದಕ್ಕೆ ಆ ಸೇವಕನು ಸೌಲನಿಗೆ ಪ್ರತ್ಯುತ್ತರವಾಗಿ--ಇಗೋ, ನನ್ನ ಕೈಯಲ್ಲಿ ಕಾಲು ಶೆಕೇಲು ಬೆಳ್ಳಿ ಅದೆ; ದೇವರ ಮನುಷ್ಯನು ನಮಗೆ ಮಾರ್ಗವನ್ನು ತಿಳಿಸುವ ಹಾಗೆ ನಾನು ಅದನ್ನು ಅವನಿಗೆ ಕೊಡುವೆನು ಅಂದನು.
- 9 (ಪೂರ್ವದಲ್ಲಿ ಇಸ್ರಾಯೇಲಿನಲ್ಲಿ ಯಾವನಾದರೂ ದೇವರ ಹತ್ತಿರ ವಿಚಾರಿಸಬೇಕಾದರೆ--ದೀರ್ಘ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ ಅನ್ನುವನು.) ಯಾಕಂದರೆ ಈ ಕಾಲದಲ್ಲಿ ಪ್ರವಾದಿ ಎಂದು ಕರೆಯಲ್ಪ ಟ್ಟವನು ಪೂರ್ವಕಾಲದಲ್ಲಿ ದೀರ್ಘದರ್ಶಿ ಎಂದು ಕರೆಯಲ್ಪಡುತ್ತಿದ್ದನು.
- 10 ಆಗ ಸೌಲನು ಸೇವಕನಿಗೆನಿನ್ನ ಮಾತು ಒಳ್ಳೇದು; ನಾವು ಹೋಗೋಣ ಬಾ ಅಂದನು. ಅವರು ದೇವರ ಮನುಷ್ಯನಿದ್ದ ಆ ಪಟ್ಟಣಕ್ಕೆ ಹೋದರು.
- 11 ಅವರು ದಿನ್ನೆಯನ್ನು ಹತ್ತಿ ಪಟ್ಟಣ ದೊಳಗೆ ಹೋಗುವಾಗ ನೀರು ಸೇದಲು ಬರುವ ಹುಡುಗಿಯರನ್ನು ನೋಡಿ -- ದರ್ಶಿಯು ಇಲ್ಲಿ ಇದ್ದಾನೋ? ಎಂದು ಅವರನ್ನು ಕೇಳಿದರು.
- 12 ಅವರು ಇವರಿಗೆ ಪ್ರತ್ಯುತ್ತರವಾಗಿ--ಅವನು ಇದ್ದಾನೆ; ಇಗೋ, ನಿಮ್ಮ ಮುಂದೆ ಇದ್ದಾನೆ; ಬೇಗ ಹೋಗಿರಿ; ಯಾಕಂದರೆ ಈ ಹೊತ್ತು ಗುಡ್ಡದ ಮೇಲೆ ಜನರು ಬಲಿಯನ್ನು ಅರ್ಪಿಸುವದರಿಂದ ಅವನು ಪಟ್ಟಣಕ್ಕೆ ಬಂದಿದ್ದಾನೆ.
- 13 ನೀವು ಪಟ್ಟಣದೊಳಗೆ ಪ್ರವೇಶಿಸುತ್ತಲೇ ತಿನ್ನುವದಕ್ಕೆ ಗುಡ್ಡದ ಮೇಲೆ ಹೋಗುವದಕ್ಕಿಂತ ಮುಂಚೆ ಅವನನ್ನು ಕಂಡುಕೊಳ್ಳುವಿರಿ. ಅವನು ಬರುವ ವರೆಗೂ ಜನರು ತಿನ್ನುವದಿಲ್ಲ. ಅವನು ಅರ್ಪಣೆಯನ್ನು ಆಶೀರ್ವದಿಸು ತ್ತಾನೆ; ತರುವಾಯ ಕರೆಯಲ್ಪಟ್ಟವರು ತಿನ್ನುತ್ತಾರೆ. ಈಗಲೇ ಹೋಗಿರಿ, ಈ ವೇಳೆಯಲ್ಲಿ ಅವನನ್ನು ಕಂಡು ಕೊಳ್ಳುವಿರಿ ಅಂದರು.
- 14 ಅವರು ಪಟ್ಟಣಕ್ಕೆ ಏರಿ ಹೋದರು. ಅವರು ಪಟ್ಟಣದಲ್ಲಿ ಪ್ರವೇಶಿಸಿದಾಗ ಇಗೋ, ಸಮುವೇಲನು ಗುಡ್ಡದ ಮೇಲೆ ಏರಿ ಹೋಗು ವದಕ್ಕೆ ಅವರಿಗೆದುರಾಗಿ ಹೊರಟು ಬಂದನು.
- 15 ಆದರೆ ಸೌಲನು ಬರುವದಕ್ಕೆ ಒಂದು ದಿವಸ ಮುಂಚೆ ಕರ್ತನು ಸಮುವೇಲನ ಕಿವಿಯಲ್ಲಿ ತಿಳಿಯ ಪಡಿಸಿದ್ದೇನಂದರೆ--
- 16 ನಾಳೆ ಇಷ್ಟು ಹೊತ್ತಿಗೆ ಬೆನ್ಯಾ ವಿಾನನ ದೇಶದವನಾದ ಒಬ್ಬ ಮನುಷ್ಯನನ್ನು ನಿನ್ನ ಬಳಿಗೆ ಕಳುಹಿಸುವೆನು; ನೀನು ಅವನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿರಲು ಅಭಿಷೇಕಿಸ ಬೇಕು; ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವನು; ನನ್ನ ಜನರ ಕೂಗು ನನ್ನ ಬಳಿಗೆ ಬಂದದರಿಂದ ಅವರನ್ನು ನೋಡಿದ್ದೇನೆ ಎಂಬದು.
- 17 ಸಮುವೇಲನು ಸೌಲನನ್ನು ನೋಡಿದಾಗ ಕರ್ತನು ಅವನಿಗೆ--ಇಗೋ, ನಾನು ನಿನಗೆ ಹೇಳಿದ ಮನು ಷ್ಯನು ಇವನೇ; ಇವನೇ ನನ್ನ ಜನರನ್ನು ಆಳುವನು ಅಂದನು.
- 18 ಸೌಲನು ಬಾಗಲಲ್ಲಿ ಇರುವ ಸಮು ವೇಲನ ಸವಿಾಪಕ್ಕೆ ಬಂದು ಅವನಿಗೆ--ದರ್ಶಿಯ ಮನೆಯು ಎಲ್ಲಿ ಇದೆ ದಯಮಾಡಿ ನೀನು ನನಗೆ ತಿಳಿಸು ಅಂದನು.
- 19 ಸಮುವೇಲನು ಸೌಲನಿಗೆ ಪ್ರತ್ಯುತ್ತ ರವಾಗಿ--ದರ್ಶಿಯು ನಾನೇ; ನೀನು ನನ್ನ ಮುಂದೆ ಗುಡ್ಡದ ಮೇಲಕ್ಕೆ ಏರಿ ಹೋಗು, ಈ ಹೊತ್ತು ನೀವು ನನ್ನ ಸಂಗಡ ತಿನ್ನಬೇಕು; ನಾಳೆ ಹೊತ್ತಾರೆ ನಿಮ್ಮನ್ನು ಕಳುಹಿಸುವೆನು; ನಿಮ್ಮ ಹೃದಯದಲ್ಲಿರುವದನ್ನೆಲ್ಲಾ ನಿಮಗೆ ತಿಳಿಯಪಡಿಸುವೆನು ಅಂದನು.
- 20 ಇಂದಿಗೆ ಮೂರನೇ ದಿವಸದಲ್ಲಿ ಕಾಣದೆ ಹೋದ ನಿನ್ನ ಕತ್ತೆಗಳ ಮೇಲೆ ನಿನ್ನ ಹೃದಯ ಇಡಬೇಡ; ಯಾಕಂದರೆ ಅವು ದೊರಕಿದವು. ಇದಲ್ಲದೆ ಇಸ್ರಾಯೇಲಿನ ಅಭಿಲಾಷೆ ಯೆಲ್ಲಾ ಯಾರ ಮೇಲೆ ಇರುವದು? ನಿನ್ನ ಮೇಲೆಯೂ ನಿನ್ನ ತಂದೆಯ ಮನೆಯವರೆಲ್ಲರ ಮೇಲೆಯೂ ಅಲ್ಲವೋ ಅಂದನು.
- 21 ಅದಕ್ಕೆ ಸೌಲನು ಅವನಿಗೆ ಪ್ರತ್ಯುತ್ತರ ವಾಗಿ--ನಾನು ಇಸ್ರಾಯೇಲ್ಯರ ಗೋತ್ರಗಳಲ್ಲೆಲ್ಲಾ ಚಿಕ್ಕದಾದ ಬೆನ್ಯಾವಿಾನನ ಗೋತ್ರದವನಲ್ಲವೇ? ಇದ ಲ್ಲದೆ ಬೆನ್ಯಾವಿಾನನ ಗೋತ್ರವು ಸಮಸ್ತ ಗೋತ್ರಗಳಲ್ಲಿ ನನ್ನ ಗೋತ್ರವು ಚಿಕ್ಕದಾದದ್ದಲ್ಲವೇ? ನೀನು ಯಾಕೆ ಹೀಗೆ ನನ್ನ ಸಂಗಡ ಮಾತನಾಡುತ್ತೀ ಅಂದನು.
- 22 ಆಗ ಸಮುವೇಲನು ಸೌಲನನ್ನು ಅವನ ಸೇವಕನನ್ನು ಕರ ತಂದು ಅತಿಥಿಗಳ ಕೊಠಡಿಯಲ್ಲಿ ಮುಖ್ಯವಾದ ಸ್ಥಳ ಕೊಟ್ಟನು.
- 23 ಅವರು ಹೆಚ್ಚು ಕಡಿಮೆ ಮೂವತ್ತು ಜನರಿದ್ದರು. ಸಮುವೇಲನು ಅಡಿಗೆಯವನಿಗೆ--ನಾನು ನಿನ್ನ ಕೈಯಲ್ಲಿ ಕೊಟ್ಟು, ಇಡಬೇಕೆಂದು ಹೇಳಿದ ಪಾಲನ್ನು ತಂದಿಡು ಅಂದನು.
- 24 ಆಗ ಅಡಿಗೆಯವನು ಒಂದು ಮುಂದೊಡೆಯನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಅದನ್ನು ಸೌಲನ ಮುಂದೆ ಇಟ್ಟನು. ಆಗ ಸಮುವೇಲನು ಸೌಲನಿಗೆ--ಇಗೋ, ಇದು ನಿನ ಗೋಸ್ಕರ ಪ್ರತ್ಯೇಕಿಸಿದ್ದು ತೆಗೆದುಕೊಂಡು ತಿನ್ನು. ಯಾಕಂದರೆ ನಾನು ಜನರನ್ನು ಕರೆದಿದ್ದೇನೆಂದು ಹೇಳಿದ ಕಾಲದಿಂದ ಈ ವರೆಗೂ ನಿನಗೋಸ್ಕರ ಇಡಲ್ಪಟ್ಟಿತ್ತು ಅಂದನು. ಹಾಗೆಯೇ ಸೌಲನು ಆ ದಿವಸದಲ್ಲಿ ಸಮುವೇಲನ ಸಂಗಡ ಊಟಮಾಡಿದನು.
- 25 ಅವರು ಗುಡ್ಡದಿಂದ ಇಳಿದು ಪಟ್ಟಣಕ್ಕೆ ಬಂದಾಗ ಸಮು ವೇಲನು ಮಾಳಿಗೆಯ ಮೇಲೆ ಸೌಲನ ಸಂಗಡ ಮಾತನಾಡಿದನು.
- 26 ಅವರು ಸೂರ್ಯೋದಯದಲ್ಲಿ ಎದ್ದು ಸಮುವೇಲನು ಸೌಲನನ್ನು ಮಾಳಿಗೆಯ ಮೇಲೆ ಕರೆದು--ಏಳು, ನಾನು ನಿನ್ನನ್ನು ಕಳುಹಿಸುತ್ತೇನೆ ಅಂದನು. ಹಾಗೆಯೇ ಸೌಲನು ಎದ್ದನು; ಆಗ ಸೌಲನೂ ಸಮುವೇಲನೂ ಇಬ್ಬರೂ ಹೊರಗೆ ಹೊರಟರು.
- 27 ಊರಿನ ಹೊರಗೆ ಬರುತ್ತಿರುವಾಗ ಸಮುವೇಲನು ಸೌಲನಿಗೆ--ನಾನು ದೇವರ ವಾರ್ತೆಯನ್ನು ನಿನಗೆ ತಿಳಿಸುವ ಹಾಗೆ ಸ್ವಲ್ಪಹೊತ್ತು ನಿಲ್ಲು; ನಿನ್ನ ಸೇವಕನನ್ನು ನಮ್ಮ ಮುಂದೆ ಹೋಗಲು ಹೇಳು ಅಂದನು. (ಅವನು ಮುಂದೆ ಹೋದನು.)
1 Samuel 09
- Details
- Parent Category: Old Testament
- Category: 1 Samuel
1 ಸಮುವೇಲನು ಅಧ್ಯಾಯ 9