- 1 ಆಗ ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವರಿಗೆ--ಓ ಇಸ್ರಾಯೇಲೇ, ನಾನು ಈಹೊತ್ತು ನಿಮಗೆ ಹೇಳುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿರಿ; ಅವುಗಳನ್ನು ಕಲಿತು ಕೈಕೊಂಡು ನಡೆಯಬೇಕು.
- 2 ನಮ್ಮ ದೇವರಾದ ಕರ್ತನು ಹೋರೇ ಬಿನಲ್ಲಿ ನಮ್ಮ ಸಂಗಡ ಆ ಒಡಂಬಡಿಕೆಯನ್ನು ಮಾಡಿದನು.
- 3 ಕರ್ತನು ಆ ಒಡಂಬಡಿಕೆಯನ್ನು ನಮ್ಮ ಪಿತೃಗಳ ಸಂಗಡ ಅಲ್ಲ, ನಮ್ಮ ಸಂಗಡವೇ ಮಾಡಿದನು. ನಾವೆಲ್ಲರೂ ಈಹೊತ್ತು ಇಲ್ಲಿ ಜೀವಿತರಾಗಿದ್ದೇವೆ.
- 4 ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು.
- 5 (ಆ ಕಾಲದಲ್ಲಿ ನಾನು ಕರ್ತನ ವಾಕ್ಯವನ್ನು ನಿಮಗೆ ತಿಳಿಸುವ ಹಾಗೆ ಕರ್ತನಿಗೂ ನಿಮಗೂ ನಡುವೆ ನಿಂತಿದ್ದೆನು; ನೀವು ಆ ಬೆಂಕಿಗೆ ಭಯಪಟ್ಟು ಬೆಟ್ಟದ ಮೇಲೆ ಏರಲಿಲ್ಲ.) ಆತನು ಹೇಳಿದ್ದೇನಂದರೆ--
- 6 ನಿನ್ನನ್ನು ಐಗುಪ್ತದೇಶದೊಳಗಿಂದ ಅಂದರೆ ದಾಸ ತ್ವದ ಮನೆಯೊಳಗಿಂದ ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಾನೇ.
- 7 ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
- 8 ಮೇಲಿನ ಆಕಾಶ ದಲ್ಲಾಗಲಿ ಕೆಳಗಿನ ಭೂಮಿಯಲ್ಲಾಗಲಿ ಭೂಮಿಯ ಕೆಳಗಿನ ನೀರುಗಳಲ್ಲಾಗಲಿ ಇರುವಂಥ ಯಾವ ದೊಂದರ ರೂಪದ ವಿಗ್ರಹವನ್ನು ನಿನಗೆ ಮಾಡಿ ಕೊಳ್ಳಬಾರದು,
- 9 ಅವುಗಳಿಗೆ ಅಡ್ಡಬೀಳಲೂಬಾರದು, ಸೇವಿಸಲೂಬಾರದು. ಯಾಕಂದರೆ ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆಮಾಡುವವರಲ್ಲಿ ಪಿತೃಗಳ ಅಕ್ರಮವನ್ನು ಮಕ್ಕಳ ಮೇಲೆ ಮೂರನೆಯ ನಾಲ್ಕನೆಯ ತಲಾಂತರದ ವರೆಗೆ ನ್ಯಾಯತೀರಿಸುತ್ತೇನೆ.
- 10 ಆದರೆ ನನ್ನನ್ನು ಪ್ರೀತಿ ಮಾಡಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಸಾವಿರಗಳ ವರೆಗೆ ಕರುಣೆ ತೋರಿಸುತ್ತೇನೆ.
- 11 ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬೇಡ; ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿಯೆಂದು ಎಣಿಸುವದಿಲ್ಲ.
- 12 ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದಂತೆ ಸಬ್ಬತ್ ದಿವಸವನ್ನು ಪರಿಶುದ್ಧಮಾಡುವದಕ್ಕೆ ಅದನ್ನು ಕಾಪಾಡು.
- 13 ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.
- 14 ಏಳನೇ ದಿವಸವು ನಿನ್ನ ದೇವರಾದ ಕರ್ತನ ಸಬ್ಬತ್ ದಿವಸವೇ; ಅದ ರಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಎತ್ತೂ ಕತ್ತೆಯೂ ಎಲ್ಲಾಪಶುಗಳೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಯೂ ಯಾವ ಕೆಲಸ ವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು.
- 15 ನೀನು ಐಗುಪ್ತ ದೇಶದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಹೊರಗೆ ಬರಮಾಡಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಕರ್ತನು ನಿನಗೆ ಸಬ್ಬತ್ ದಿವಸವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾನೆ.
- 16 ನಿನ್ನ ದಿವಸಗಳು ಹೆಚ್ಚಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ನಿನಗೆ ಒಳ್ಳೇದಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ಆಜ್ಞಾಪಿಸಿದಂತೆ ನಿನ್ನ ತಂದೆಯನ್ನೂ ನಿನ್ನ ತಾಯಿಯನ್ನೂ ಸನ್ಮಾನಿಸು.
- 17 ಕೊಲ್ಲಬೇಡ
- 18 ವ್ಯಭಿಚಾರ ಮಾಡಬೇಡ.
- 19 ಕದಿಯಬೇಡ.
- 20 ನಿನ್ನ ನೆರೆಯವನ ಮೇಲೆ ಸುಳ್ಳುಸಾಕ್ಷಿ ಹೇಳಬೇಡ.
- 21 ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ; ನೆರೆಯವನ ಮನೆಯನ್ನೂ ಅವನ ಹೊಲವನ್ನೂ ದಾಸ ದಾಸಿಯರನ್ನೂ ಪಶು ಕತ್ತೆಗಳನ್ನೂ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬೇಡ ಎಂದು ಹೇಳಿದನು.
- 22 ಈ ಮಾತುಗಳನ್ನು ಕರ್ತನು ಬೆಂಕಿಯ ಮೇಘದ ಕಾರ್ಗತ್ತಲೆಯ ಮಧ್ಯದಿಂದಲೂ ಮಹಾಶಬ್ದ ದಿಂದಲೂ ಬೆಟ್ಟದಲ್ಲಿ ನಿಮ್ಮ ಸಭೆಗೆಲ್ಲಾ ಹೇಳಿದನು; ಹೆಚ್ಚೇನೂ ಕೂಡಿಸಲಿಲ್ಲ. ಇವುಗಳನ್ನು ಆತನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟನು.
- 23 (ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿರಲಾಗಿ ನೀವು ಕತ್ತಲೆಯಿಂದ ಆ ಶಬ್ದವನ್ನು ಕೇಳಿ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ನಿಮ್ಮ ಹಿರಿಯರೂ ನನ್ನ ಬಳಿಗೆ ಬಂದು ನನಗೆ)
- 24 ಇಗೋ, ನಮ್ಮ ದೇವರಾದ ಕರ್ತನು ತನ್ನ ಮಹಿಮೆಯನ್ನೂ ತನ್ನ ಘನವನ್ನೂ ನಮಗೆ ತೋರಿಸಿದ್ದಾನೆ; ಆತನ ಶಬ್ದವನ್ನು ಬೆಂಕಿಯೊಳಗಿಂದ ಕೇಳಿದ್ದೇವೆ; ದೇವರು ಮನುಷ್ಯರ ಸಂಗಡ ಮಾತ ನಾಡಲು ಅವರು ಬದುಕುತ್ತಾರೆಂದು ಈಹೊತ್ತು ನೋಡಿದ್ದೇವೆ.
- 25 ಹಾಗಾದರೆ ಈಗ ನಾವು ಯಾಕೆ ಸಾಯಬೇಕು? ಈ ಮಹಾಅಗ್ನಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವದು; ನಾವು ಇನ್ನೂ ನಮ್ಮ ದೇವರಾದ ಕರ್ತನ ಶಬ್ದವನ್ನು ಕೇಳಿದರೆ ಸಾಯುತ್ತೇವೆ.
- 26 ಸಮಸ್ತ ಜನರಲ್ಲಿ ಯಾರು ನಮ್ಮ ಹಾಗೆ ಬೆಂಕಿಯೊಳ ಗಿಂದ ಮಾತನಾಡುವ ಜೀವವುಳ್ಳ ದೇವರ ಶಬ್ದವನ್ನು ಕೇಳಿ ಬದುಕಿದರು?
- 27 ನೀನೇ ಸವಿಾಪಕ್ಕೆ ಹೋಗಿ ನಮ್ಮ ದೇವರಾದ ಕರ್ತನು ಹೇಳುವದನ್ನೆಲ್ಲಾ ಕೇಳಿ ನಮ್ಮ ದೇವರಾದ ಕರ್ತನು ನಿನಗೆ ಹೇಳಿದ್ದನ್ನೆಲ್ಲಾ ನೀನೇ ನಮಗೆ ಹೇಳು; ಆಗ ನಾವು ಕೇಳಿ ಅದನ್ನು ಮಾಡುವೆವು ಎಂದು ಹೇಳಿದಿರಿ.
- 28 ನೀವು ನನ್ನ ಹತ್ತಿರ ಮಾತನಾಡಿದಾಗ ಕರ್ತನು ನಿಮ್ಮ ಮಾತುಗಳ ಶಬ್ದವನ್ನು ಕೇಳಿ ನನಗೆ--ಈ ಜನರು ನಿನಗೆ ಹೇಳಿದ ಮಾತುಗಳ ಶಬ್ದವನ್ನು ಕೇಳಿ ದ್ದೇನೆ. ಅವರು ಹೇಳಿದ್ದೆಲ್ಲಾ ಒಳ್ಳೇದು.
- 29 ಅವರು ನನಗೆ ಭಯಪಟ್ಟು ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಕೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೇದು; ಆಗ ಅವರಿಗೂ ಅವರ ಮಕ್ಕಳಿಗೂ ಎಂದೆಂ ದಿಗೂ ಒಳ್ಳೆಯದಾಗುವದು.
- 30 ನೀನು ಹೋಗಿ ಅವರಿಗೆ--ನಿಮ್ಮ ಡೇರೆಗಳಿಗೆ ತಿರುಗಿಕೊಳ್ಳಬೇಕು ಎಂದು ಹೇಳು.
- 31 ನೀನಾದರೋ ಇಲ್ಲಿ ನನ್ನ ಸಂಗಡ ನಿಂತು ಕೋ; ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞೆ ನಿಯಮ ನ್ಯಾಯ ಗಳನ್ನು ನಿನಗೆ ಹೇಳುವೆನು ಅಂದನು.
- 32 ಹೀಗಿರುವದರಿಂದ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದಂತೆ ಕೈಕೊಂಡು ನಡೆಯಬೇಕು; ಎಡಕ್ಕಾದರೂ ಬಲಕ್ಕಾದರೂ ತಿರುಗಬೇಡಿರಿ.
- 33 ನೀವು ಬದುಕುವ ಹಾಗೆಯೂ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ಮಾರ್ಗ ಗಳಲ್ಲಿ ನಡಕೊಳ್ಳಬೇಕು.
Deuteronomy 05
- Details
- Parent Category: Old Testament
- Category: Deuteronomy
ಧರ್ಮೋಪದೇಶಕಾಂಡ ಅಧ್ಯಾಯ 5