- 1 ಆಗ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ.
- 2 ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು.
- 3 ಕರ್ತನು ಯುದ್ಧ ಶೂರನು; ಕರ್ತನು ಎಂಬದೇ ಆತನ ಹೆಸರು.
- 4 ಆತನು ಫರೋಹನ ರಥಗಳನ್ನೂ ಅವನ ಸೈನ್ಯವನ್ನೂ ಸಮುದ್ರ ದಲ್ಲಿ ನೂಕಿದ್ದಾನೆ; ಆಯಲ್ಪಟ್ಟ ಅವನ ಅಧಿಪತಿಗಳು ಸಹ ಕೆಂಪು ಸಮುದ್ರದಲ್ಲಿ ಮುಳುಗಿಹೋದರು.
- 5 ಅಗಾಧಗಳು ಅವರನ್ನು ಮುಚ್ಚಿಕೊಂಡವು. ಅವರು ಕಲ್ಲಿನಂತೆ (ಸಮುದ್ರದ) ತಳಕ್ಕೆ ಮುಳುಗಿದರು.
- 6 ಓ ಕರ್ತನೇ, ನಿನ್ನ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳ ದ್ದಾಗಿದೆ. ಓ ಕರ್ತನೇ, ನಿನ್ನ ಬಲಗೈ ಶತ್ರುವನ್ನು ಜಜ್ಜಿ ಪುಡಿಮಾಡಿತು.
- 7 ನಿನ್ನ ಮಹತ್ತಾದ ಘನತೆಯಲ್ಲಿ ನಿನಗೆ ವಿರೋಧವಾಗಿ ಎದ್ದವರನ್ನು ಕೆಡವಿ ಬಿಟ್ಟಿರುವಿ. ನಿನ್ನ ರೌದ್ರವು ಹೊರಟು ಅವರನ್ನು ಹುಲ್ಲಿನಂತೆ ದಹಿಸಿಬಿಟ್ಟಿತು.
- 8 ನಿನ್ನ ಮೂಗಿನ ಬಿರುಸಾದ ಗಾಳಿ ಯಿಂದ ನೀರುಗಳು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು; ಸಮುದ್ರದ ಅಗಾಧಗಳ ನೀರು ಗಟ್ಟಿಯಾದವು.
- 9 ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು.
- 10 ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು.
- 11 ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ?
- 12 ನೀನು ನಿನ್ನ ಬಲಗೈಯನ್ನು ಚಾಚಲು ಭೂಮಿಯು ಅವರನ್ನು ನುಂಗಿತು.
- 13 ನೀನು ವಿಮೋಚಿ ಸಿದ ಜನರನ್ನು ಕರುಣೆಯಿಂದ ನಡಿಸಿದಿ; ನೀನು ಅವ ರನ್ನು ನಿನ್ನ ಬಲದಿಂದ ನಿನ್ನ ಪರಿಶುದ್ಧ ನಿವಾಸಕ್ಕೆ ನಡಿಸಿದಿ.
- 14 ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು.
- 15 ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.
- 16 ಭಯವೂ ಹೆದರಿಕೆಯೂ ಅವರ ಮೇಲೆ ಬೀಳು ವದು; ನಿನ್ನ ಜನರು ದಾಟಿ ಹೋಗುವ ವರೆಗೆ ಓ ಕರ್ತನೇ, ನೀನು ಕೊಂಡುಕೊಂಡ ಜನರು ದಾಟಿ ಹೋಗುವ ವರೆಗೆ ನಿನ್ನ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು.
- 17 ನೀನು ಅವರನ್ನು ಒಳಗೆ ಬರಮಾಡಿ ಓ ಕರ್ತನೇ, ನಿನ್ನ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ (ಓ ಕರ್ತನೇ,) ನೀನು ವಾಸಿಸುವದಕ್ಕೆ ಮಾಡಿಕೊಂಡಿರುವ ನಿನ್ನ ಸ್ವಾಸ್ಥ್ಯದ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿ.
- 18 ಕರ್ತನು ಯುಗಯುಗಾಂತರಗಳ ವರೆಗೆ ಆಳುವನು.
- 19 ಫರೋ ಹನ ಕುದುರೆಗಳು ಅವನ ರಥಗಳ ಸಂಗಡಲೂ ಸವಾರರ ಸಂಗಡಲೂ ಸಮುದ್ರದೊಳಗೆ ಬಂದಾಗ ಕರ್ತನು ಸಮುದ್ರದ ನೀರನ್ನು ಅವರ ಮೇಲೆ ತಿರಿಗಿ ಬರ ಮಾಡಿದನು; ಆದರೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣನೆಲದ ಮೇಲೆ ಹೋದರು.
- 20 ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು.
- 21 ಮಿರ್ಯಾಮಳು ಅವರಿಗೆ ಕೊಟ್ಟ ಉತ್ತರವೇನಂದರೆ--ನೀವು ಕರ್ತನಿಗೆ ಹಾಡಿರಿ, ಆತನು ಮಹಿಮೆಯಿಂದ ಜಯಿಸಿದ್ದಾನೆ; ಕುದುರೆಯನ್ನು ಸವಾರ ನನ್ನು ಸಮುದ್ರದಲ್ಲಿ ಹಾಕಿದ್ದಾನೆ ಎಂಬದು.
- 22 ಹೀಗೆ ಮೋಶೆಯು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದಿಂದ ಬರಮಾಡಿದನು; ಅವರು ಶೂರಿನ ಅರಣ್ಯದೊಳಗೆ ಹೋದರು; ಅವರು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿದಾಗ್ಯೂ ನೀರನ್ನು ಕಂಡುಕೊಳ್ಳಲಿಲ್ಲ.
- 23 ಅವರು ಮಾರಾಗೆ ಬಂದ ಮೇಲೆ ಮಾರಾದ ನೀರನ್ನು ಕುಡಿಯಲಾರದೆ ಇದ್ದರು; ಯಾಕಂದರೆ ಅದು ಕಹಿಯಾಗಿತ್ತು. ಆದಕಾರಣ ಅದರ ಹೆಸರು ಮಾರಾ ಎಂದು ಕರೆಯಲ್ಪಟ್ಟಿತು.
- 24 ಆದದ ರಿಂದ ಜನರು--ನಾವು ಏನು ಕುಡಿಯೋಣ ಎಂದು ಹೇಳಿ ಮೋಶೆಗೆ ವಿರೋಧವಾಗಿ ಗುಣುಗುಟ್ಟಿದರು.
- 25 ಅವನು ಕರ್ತನಿಗೆ ಮೊರೆಯಿಟ್ಟನು; ಆಗ ಕರ್ತನು ಅವನಿಗೆ ಒಂದು ಮರವನ್ನು ತೋರಿಸಿದನು; ಅವನು ಅದನ್ನು ನೀರಿನಲ್ಲಿ ಹಾಕಿದಾಗ ನೀರು ಸಿಹಿಯಾಗಿ ಮಾಡಲ್ಪಟ್ಟಿತು; ಅಲ್ಲಿ ಆತನು ಅವರಿಗಾಗಿ ಒಂದು ನಿಯಮವನ್ನೂ ಒಂದು ಶಾಸನವನ್ನೂ ಮಾಡಿ, ಅಲ್ಲಿಯೇ ಅವರನ್ನು ಪರೀಕ್ಷಿಸಿದನು.
- 26 ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.
- 27 ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
Exodus 15
- Details
- Parent Category: Old Testament
- Category: Exodus
ವಿಮೋಚನಕಾಂಡ ಅಧ್ಯಾಯ 15