- 1 ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಬಾಬೆಲಿಗೆ ವಿರೋಧವಾಗಿಯೂ ನನಗೆದುರಾಗಿ ಎದ್ದಿರುವವರ ಮಧ್ಯದಲ್ಲಿ ವಾಸಿಸುವ ವರಿಗೆ ವಿರೋಧವಾಗಿಯೂ ನಾಶಮಾಡುವ ಗಾಳಿ ಯನ್ನು ಎಬ್ಬಿಸುತ್ತೇನೆ.
- 2 ಬಾಬೆಲಿಗೆ ತೂರುವವರನ್ನು ಕಳುಹಿಸುವೆನು; ಅವರು ಅದನ್ನು ತೂರಿ ಅದರ ದೇಶವನ್ನು ಬರಿದುಮಾಡುವರು; ದುರ್ದಿನದಲ್ಲಿ ಸುತ್ತಲಾಗಿ ಅದಕ್ಕೆ ವಿರೋಧವಾಗಿರುವರು.
- 3 ಬಿಲ್ಲು ಬೊಗ್ಗಿಸುವವನಿಗೆ ವಿರೋಧವಾಗಿಯೂ ಕವಚದಲ್ಲಿ ತನ್ನನ್ನು ಹೆಚ್ಚಿಸಿ ಕೊಳ್ಳುವವನಿಗೆ ವಿರೋಧವಾಗಿಯೂ ಬಿಲ್ಲಿನವನು ತನ್ನ ಬಿಲ್ಲನ್ನು ಬೊಗ್ಗಿಸಲಿ; ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ.
- 4 ಈ ಪ್ರಕಾರ ಕಸ್ದೀಯರ ದೇಶದಲ್ಲಿ ಕೊಂದುಹಾಕಲ್ಪ ಟ್ಟವರೂ ಅದರ ಬೀದಿಗಳಲ್ಲಿ ತಿವಿಯಲ್ಪಟ್ಟವರೂ ಬೀಳುವರು.
- 5 ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಇಸ್ರಾಯೇಲಾದರೂ ಯೆಹೂದವಾದರೂ ತನ್ನ ದೇವರಾದ ಸೈನ್ಯಗಳ ಕರ್ತನಿಂದ ಬಿಡಲ್ಪಟ್ಟದ್ದಲ್ಲ.
- 6 ಬಾಬೆಲಿನೊಳಗಿಂದ ಓಡಿಹೋಗಿರಿ, ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಅಕ್ರಮದಲ್ಲಿ ನಾಶವಾಗ ಬೇಡಿರಿ; ಇದು ಕರ್ತನ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆಮುಯ್ಯಿ ಕೊಡುತ್ತಾನೆ.
- 7 ಬಾಬೆಲ್ ಕರ್ತನ ಕೈಯಲ್ಲಿ ಭೂಮಿಗೆಲ್ಲಾ ಅಮಲೇರಿ ಸಿದ ಚಿನ್ನದ ಪಾತ್ರೆಯಾಗಿತ್ತು; ಜನಾಂಗಗಳು ಅದರ ದ್ರಾಕ್ಷಾರಸವನ್ನು ಕುಡಿದವು; ಆದದರಿಂದ ಜನಾಂಗ ಗಳು ಹುಚ್ಚರಾದರು.
- 8 ಇದ್ದಕ್ಕಿದ್ದ ಹಾಗೆ ಬಾಬೆಲ್ ಬಿದ್ದು ಮುರಿಯಲ್ಪಟ್ಟಿದೆ; ಅದರ ವಿಷಯ ಗೋಳಾ ಡಿರಿ; ಅದರ ನೋವಿಗೆ ತೈಲ ತಕ್ಕೊಳ್ಳಿರಿ; ಒಂದು ವೇಳೆ ವಾಸಿಯಾದೀತು.
- 9 ನಾವು ಬಾಬೆಲನ್ನು ವಾಸಿಮಾಡುವದಕ್ಕಿದ್ದೆವು. ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳ ವರೆಗೂ ಏಳುತ್ತದೆ.
- 10 ಕರ್ತನು ನಮ್ಮ ನೀತಿಯನ್ನು ಹೊರಗೆ ತಂದಿದ್ದಾನೆ; ಬನ್ನಿ, ನಮ್ಮ ದೇವರಾದ ಕರ್ತನ ಕ್ರಿಯೆಯನ್ನು, ಚೀಯೋನಿನಲ್ಲಿ ಸಾರಿ ಹೇಳೋಣ.
- 11 ಬಾಣಗಳನ್ನು ಮೆರಗು ಮಾಡಿರಿ, ಡಾಲುಗಳನ್ನು ಕೂಡಿಸಿರಿ; ಕರ್ತನು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾನೆ; ಆತನ ಆಲೋಚನೆ ಬಾಬೆಲಿಗೆ ವಿರೋಧವಾಗಿ ಅದನ್ನು ನಾಶಮಾಡುವದಕ್ಕೆ ಇದೆ. ಇದು ಕರ್ತನ ಪ್ರತಿದಂಡ ನೆಯೂ ಆತನ ದೇವಾಲಯದ ಪ್ರತಿದಂಡನೆಯೂ ಆಗಿದೆ.
- 12 ಬಾಬೆಲಿನ ಗೋಡೆಯ ಮೇಲೆ ಧ್ವಜವನ್ನೆತ್ತಿರಿ, ಪಹರೆ ಬಲಪಡಿಸಿರಿ, ಕಾವಲುಗಾರರನ್ನು ನಿಲ್ಲಿಸಿರಿ; ಹೊಂಚಿ ಕೊಳ್ಳುವವರನ್ನು ಸಿದ್ಧಮಾಡಿರಿ; ಕರ್ತನು ಬಾಬೆಲಿನ ನಿವಾಸಿಗಳಿಗೆ ವಿರೋಧವಾಗಿ ತಾನು ಹೇಳಿದ್ದನ್ನು ಯೋಚಿಸಿ ಮಾಡಿದ್ದಾನೆ.
- 13 ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳ ವಳೇ, ನಿನ್ನ ಅಂತ್ಯವೂ ನಿನ್ನ ದುರ್ಲಾಭದ ಅಳತೆಯೂ ಬಂತು.
- 14 ಸೈನ್ಯಗಳ ಕರ್ತನು--ನಿಶ್ಚಯ ವಾಗಿ ನಾನು ಹುಳಗಳಿಂದಾದ ಹಾಗೆ ಮನುಷ್ಯರಿಂದ ನಿನ್ನನ್ನು ತುಂಬಿಸುತ್ತೇನೆಂದು ಅವರು ನಿನಗೆ ವಿರೋಧ ವಾಗಿ ಆರ್ಭಟವನ್ನು ಎತ್ತುವರೆಂದು ತನ್ನ ಮೇಲೆ ಆಣೆ ಇಟ್ಟುಕೊಂಡಿದ್ದಾನೆ.
- 15 ಆತನು ತನ್ನ ಶಕ್ತಿಯಿಂದ ಭೂಮಿಯನ್ನು ಉಂಟುಮಾಡಿ ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾನೆ.
- 16 ಆತನು ತನ್ನ ಶಬ್ದವನ್ನು ಎತ್ತುವಾಗ ಆಕಾಶದಲ್ಲಿ ನೀರಿನ ಘೋಷವದೆ; ಆತನು ಭೂಮಿಯ ಅಂತ್ಯದಿಂದ ಹಬೆಯನ್ನು ಏರ ಮಾಡುತ್ತಾನೆ; ಮಳೆಯ ಸಂಗಡ ಮಿಂಚುಗಳನ್ನು ಮಾಡಿ ತನ್ನ ಭಂಡಾರಗಳೊ ಳಗಿಂದ ಗಾಳಿಯನ್ನು ಹೊರಗೆ ತರುತ್ತಾನೆ.
- 17 ಮನುಷ್ಯ ರೆಲ್ಲರೂ ತಮ್ಮ ತಿಳುವಳಿಕೆಯಿಂದ ಮೂಢರಾಗಿದ್ದಾರೆ; ಎರಕ ಹೊಯ್ಯುವವರೆಲ್ಲರೂ ವಿಗ್ರಹದಿಂದ ನಾಚಿಕೆ ಪಡುತ್ತಾರೆ; ಅವರ ಎರಕದ ಬೊಂಬೆಗಳು ಸುಳ್ಳೇ; ಅವುಗಳಲ್ಲಿ ಉಸಿರು ಇಲ್ಲ.
- 18 ಅವು ಮಾಯವೇ, ಮೋಸದ ಕೆಲಸವೇ; ಅವುಗಳ ವಿಚಾರಣೆಯ ಕಾಲದಲ್ಲಿ ನಾಶವಾಗುವವು.
- 19 ಯಾಕೋಬನ ಭಾಗವು ಇವುಗಳ ಹಾಗಲ್ಲ; ಆತನು ಎಲ್ಲವನ್ನು ರೂಪಿಸಿದವನೇ, ಆತನ ಸ್ವಾಸ್ತ್ಯದ ಕೋಲು ಇಸ್ರಾಯೇಲೇ; ಆತನ ಹೆಸರು ಸೈನ್ಯಗಳ ಕರ್ತನೇ.
- 20 ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ;
- 21 ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ.
- 22 ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ.
- 23 ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ.
- 24 ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ.
- 25 ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
- 26 ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ.
- 27 ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ.
- 28 ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ ಮೇದ್ಯರ ಅರಸರನ್ನೂ ಅದರ ಅಧಿಪತಿಗಳನ್ನೂ ಅಧಿಕಾರಿಗಳೆಲ್ಲರನ್ನೂ ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ.
- 29 ಆಗ ದೇಶವು ಕದಲಿ ವೇದನೆಪಡುವದು; ಬಾಬೆಲಿನ ದೇಶವನ್ನು ನಿವಾಸಿ ಇಲ್ಲದೆ ಹಾಳುಮಾಡುವ ವಿಷಯವಾಗಿ ಬಾಬೆಲಿಗೆ ವಿರೋಧವಾದ ಕರ್ತನ ಆಲೋಚನೆಗಳು ಮಾಡಲ್ಪಡು ವವು.
- 30 ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ.
- 31 ಪಟ್ಟಣವು ಒಂದು ಕಡೆಯಲ್ಲಿ ಹಿಡಿಯಲ್ಪಟ್ಟಿದೆ ಎಂದೂ ದಾಟುವ ಸ್ಥಳಗಳು ವಶವಾದವೆಂದೂ ಬಿದಿರುಗಳು ಬೆಂಕಿಯಿಂದ ಸುಡಲ್ಪಟ್ಟಿವೆ ಎಂದೂ ಯುದ್ಧಸ್ಥರು ಗಾಬರಿ ಪಟ್ಟರೆಂದೂ
- 32 ಬಾಬೆಲಿನ ಅರಸನಿಗೆ ತಿಳಿಸುವದಕ್ಕೆ ಓಡುವವನು ಓಡುವವನನ್ನೂ ತಿಳಿಸುವವನು ತಿಳಿಸುವವನನ್ನೂ ಎದುರುಗೊಳ್ಳುವದಕ್ಕೆ ಓಡುವರು.
- 33 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತುಳಿಯುವ ವೇಳೆಯಲ್ಲಿ ಕಣವು ಹೇಗೋ, ಹಾಗೆಯೇ ಬಾಬೆಲಿನ ಮಗಳು ಇದ್ದಾಳೆ; ಇನ್ನು ಸ್ವಲ್ಪ ಹೊತ್ತಾದ ಮೇಲೆ ಅದಕ್ಕೆ ಸುಗ್ಗೀಕಾಲ ಬರುವದು.
- 34 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.
- 35 ನನಗೂ ನನ್ನ ಶರೀರಕ್ಕೂ ಮಾಡಿರುವ ಬಲಾತ್ಕಾರವು ಬಾಬೆಲಿನ ಮೇಲೆ ಇರಲಿ ಎಂದು ಚೀಯೋನಿನ ನಿವಾಸಿ ಹೇಳುವನು; ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ ಎಂದು ಯೆರೂಸಲೇಮು ಹೇಳುವದು.
- 36 ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ;
- 37 ಬಾಬೆಲ್ ದಿಬ್ಬೆಗಳಾಗುವದು; ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವೂ ಆಶ್ಚರ್ಯವೂ ಹಾಳೂ ಸಿಳ್ಳಿಡುವಿಕೆಯೂ ಆಗುವದು.
- 38 ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು, ಸಿಂಹದ ಮರಿಗಳ ಹಾಗೆ ಶಬ್ದ ಮಾಡುವರು.
- 39 ಅವರ ಉರಿಯಲ್ಲಿ ನಾನು ಅವರ ಔತಣವನ್ನು ಸಿದ್ಧಮಾಡುವೆನು; ಅವರು ಉಲ್ಲಾಸಿಸಿ ನಿತ್ಯವಾದ ನಿದ್ರೆಯನ್ನು ಮಾಡಿ ಎಚ್ಚರವಾಗದ ಹಾಗೆ ಅವರಿಗೆ ಅಮಲೇರಿಸುವೆನೆಂದು ಕರ್ತನು ಅನ್ನುತ್ತಾನೆ.
- 40 ಕುರಿಮರಿಗಳ ಹಾಗೆ ಟಗರು ಗಳ ಹೋತಗಳ ಹಾಗೆ ಅವರನ್ನು ಕೊಲೆಗೆ ಇಳಿಸುವೆನು.
- 41 ಶೇಷಕ್ ಹೇಗೆ ಹಿಡಿಯಲ್ಪಟ್ಟಿದೆ, ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ; ಬಾಬೆಲ್ ಜನಾಂಗಗಳೊಳಗೆ ಹೀಗೆ ವಿಸ್ಮಯಗೊಳಗಾಯಿತು!
- 42 ಬಾಬೆಲಿನ ಮೇಲೆ ಸಮುದ್ರವು ಬಂತು; ಅದರ ತೆರೆಗಳ ಸಮೂಹದಿಂದ ಮುಚ್ಚಲ್ಪಟ್ಟಿದೆ.
- 43 ಅದರ ಪಟ್ಟಣಗಳು ಹಾಳಾದವು; ಅವು ಒಣನೆಲವೂ ಅಡವಿಯೂ ಯಾರೂ ವಾಸಮಾಡದೆ, ಮನುಷ್ಯನ ಮಗನು ಹಾದುಹೋಗದೆ ಇರುವ ದೇಶವೂ ಆಗಿವೆ.
- 44 ನಾನು ಬಾಬೆಲಿನಲ್ಲಿರುವ ಬೇಲ್‌ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು.
- 45 ನನ್ನ ಜನರೇ, ಅದರೊಳಗಿಂದ ಹೊರಡಿರಿ; ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣವನ್ನು ಕರ್ತನ ಕೋಪದ ಉರಿಗೆ ತಪ್ಪಿಸಿರಿ.
- 46 ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
- 47 ಆದದರಿಂದ ಇಗೋ, ದಿನಗಳು ಬರುವವು; ಆಗ ನಾನು ಬಾಬೆಲಿನ ವಿಗ್ರಹಗಳಿಗೆ ನ್ಯಾಯತೀರಿ ಸುವೆನು. ಅದರ ದೇಶವೆಲ್ಲಾ ನಾಚಿಕೆಪಡುವದು; ಕೊಲ್ಲಲ್ಪಟ್ಟವರು ಅದರ ಮಧ್ಯದಲ್ಲಿ ಬೀಳುವರು.
- 48 ಆಗ ಆಕಾಶವೂ ಭೂಮಿಯೂ ಅವುಗಳಲ್ಲಿರುವ ಸಮಸ್ತವೂ ಬಾಬೆಲಿನ ವಿಷಯವಾಗಿ ಹಾಡುವೆವು. ಸೂರೆ ಮಾಡುವವರು ಉತ್ತರದಿಂದ ಅದಕ್ಕೆ ವಿರೋಧ ವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
- 49 ಬಾಬೆಲು ಇಸ್ರಾಯೇಲಿನ ಕೊಲ್ಲಲ್ಪಟ್ಟವರನ್ನು ಬೀಳಿಸಿದ ಹಾಗೆ ಬಾಬೆಲಿನ ಸಮಸ್ತ ದೇಶದಲ್ಲಿ ಕೊಲ್ಲಲ್ಪಟ್ಟವರು ಬೀಳು ವರು.
- 50 ಕತ್ತಿಗೆ ತಪ್ಪಿಸಿಕೊಂಡವರೇ, ನಡೆಯಿರಿ, ನಿಲ್ಲಬೇಡಿರಿ; ದೂರದಲ್ಲಿ ಕರ್ತನನ್ನು ಜ್ಞಾಪಕಮಾಡಿ ಕೊಳ್ಳಿರಿ, ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ.
- 51 ನಾಚಿಕೆಪಡುತ್ತೇವೆ, ನಿಂದೆಯನ್ನು ಕೇಳಿದ್ದೇವೆ; ಅವಮಾನ ನಮ್ಮ ಮುಖಗಳನ್ನು ಮುಚ್ಚಿದೆ; ಅನ್ಯರು ಕರ್ತನ ಆಲಯದ ಪರಿಶುದ್ಧ ಸ್ಥಳಗಳಲ್ಲಿ ಬಂದಿದ್ದಾರೆ.
- 52 ಆದದರಿಂದ ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅವಳ ಕೆತ್ತಿದ ವಿಗ್ರಹಗಳಿಗೆ ನ್ಯಾಯತೀರಿಸುತ್ತೇನೆ. ಅವಳ ದೇಶದಲ್ಲೆಲ್ಲಾ ಗಾಯಪಟ್ಟವರು ನರಳುವರು.
- 53 ಬಾಬೆಲ್ ಆಕಾಶಕ್ಕೆ ಏರಿದರೂ ಅದರ ಬಲದ ಉನ್ನತ ಸ್ಥಾನವನ್ನು ಭದ್ರಮಾಡಿದರೂ ಸೂರೆಮಾಡು ವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
- 54 ಬಾಬೆಲಿನಿಂದ ಕೂಗುವ ಶಬ್ದವು! ಕಸ್ದೀಯರ ದೇಶದಿಂದ ಮಹಾನಾಶನವು ಬರುವದು.
- 55 ಕರ್ತನು ಬಾಬೆಲನ್ನು ಸೂರೆಮಾಡಿ ದ್ದಾನೆ; ಅವಳೊಳಗಿಂದ ಮಹಾ ಶಬ್ದವನ್ನು ತೆಗೆದುಹಾಕಿ ದ್ದಾನೆ; ಅವಳ ತೆರೆಗಳು ಬಹಳ ನೀರುಗಳ ಹಾಗೆ ಘೋಷಿಸುವಾಗ ಅವುಗಳ ಶಬ್ದದ ಧ್ವನಿ ಹೊರಟಿತು.
- 56 ಸೂರೆ ಮಾಡುವವನು ಅದರ ಮೇಲೆ ಅಂದರೆ ಬಾಬೆಲಿನ ಮೇಲೆಯೇ ಬಂದಿದ್ದಾನೆ; ಅದರ ಪರಾಕ್ರಮಶಾಲಿಗಳು ಹಿಡಿಯಲ್ಪಟ್ಟಿದ್ದಾರೆ; ಅವಳ ಬಿಲ್ಲುಗಳು ಮುರಿಯಲ್ಪಟ್ಟಿವೆ; ಪ್ರತಿದಂಡನೆಗಳ ದೇವರಾದ ಕರ್ತನು ನಿಶ್ಚಯವಾಗಿ ಮುಯ್ಯಿಗೆ ಮುಯ್ಯಿ ತೀರಿಸುವನು.
- 57 ಇದಲ್ಲದೆ ನಾನು ಅವಳ ಪ್ರಧಾನಿಗಳನ್ನೂ, ಜ್ಞಾನಿಗಳನ್ನೂ, ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಮತ್ತರಾಗಮಾಡುತ್ತೇನೆ; ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವದಿಲ್ಲವೆಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
- 58 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅಗಲವಾದ ಗೋಡೆಗಳು ಸಂಪೂರ್ಣವಾಗಿ ಕೆಡವಲ್ಪ ಡುವವು; ಅವಳ ಎತ್ತರವಾದ ಬಾಗಲುಗಳು ಬೆಂಕಿ ಯಿಂದ ಸುಡಲ್ಪಡುವವು; ಜನರು ವ್ಯರ್ಥಕ್ಕಾಗಿಯೂ ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸ ಪಡುವರು.
- 59 ಪ್ರವಾದಿಯಾದ ಯೆರೆವಿಾಯನು ಮಹ್ಸೇಯನ ಮಗನಾದ ನೇರೀಯನ ಮಗನಾದ ಸೆರಾಯನಿಗೆ, ಅವನು ಯೆಹೂದದ ಅರಸನಾದ ಚಿದ್ಕೀಯನ ಸಂಗಡ, ಇವನ ಆಳಿಕೆಯ ನಾಲ್ಕನೇ ವರುಷದಲ್ಲಿ ಬಾಬೆಲಿಗೆ ಹೋದಾಗ ಆಜ್ಞಾಪಿಸಿದ ವಾಕ್ಯವು. ಆ ಸೆರಾಯನು ಶಾಂತವಾದ ಪ್ರಧಾನಿಯಾಗಿದ್ದನು.
- 60 ಹೀಗೆ ಯೆರೆವಿಾಯನು ಬಾಬೆಲಿನ ಮೇಲೆ ಬರುವ ಕೇಡನ್ನೆಲ್ಲಾ ಬಾಬೆಲಿಗೆ ವಿರೋಧವಾಗಿ ಬರೆದಿರುವ ಈ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆದನು.
- 61 ಯೆರೆವಿಾಯನು ಸೆರಾಯನಿಗೆ ಹೇಳಿದ್ದೇನಂದರೆ-- ನೀನು ಬಾಬೆಲಿಗೆ ಬಂದು
- 62 ಈ ವಾಕ್ಯಗಳನ್ನೆಲ್ಲಾ ನೋಡಿ ಓದುತ್ತಿರುವಾಗ ಹೇಳತಕ್ಕದ್ದೇನಂದರೆ--ಓ ಕರ್ತನೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯ ರಾಗಲಿ, ಮೃಗಗಳಾಗಲಿ ನಿವಾಸಿಗಳು ಎಂದಿಗೂ ಇರದ ಹಾಗೆಯೂ ಅದು ನಿತ್ಯವಾಗಿ ಹಾಳಾಗುವ ಹಾಗೆಯೂ ಅದನ್ನು ಕಡಿದುಬಿಡುತ್ತೇನೆಂದು ನೀನೇ ಮಾತನಾ ಡಿದ್ದೀ.
- 63 ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅದಕ್ಕೆ ಕಲ್ಲುಕಟ್ಟಿ ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ ಹೀಗೆ ಹೇಳು--ಈ ಪ್ರಕಾರ ಬಾಬೆಲ್ ಮುಳುಗಿಹೋಗುವದು;
- 64 ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು, ಅವರು ಆಯಾಸ ಪಡುವರು. ಇಲ್ಲಿಯ ತನಕ ಯೆರೆವಿಾಯನ ವಾಕ್ಯಗಳು.
Jeremiah 51
- Details
- Parent Category: Old Testament
- Category: Jeremiah
ಯೆರೆಮಿಯ ಅಧ್ಯಾಯ 51