- 1 ಆ ಕಾಲದಲ್ಲಿ ಅರಸನಾದ ಹೆರೋದನು ಸಭೆಯಲ್ಲಿ ಕೆಲವರನ್ನು ಬಾಧಿಸುವದಕ್ಕಾಗಿ ತನ್ನ ಕೈ ಎತ್ತಿ
- 2 ಯೋಹಾನನ ಸಹೋದರನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.
- 3 ಇದು ಯೆಹೂದ್ಯರಿಗೆ ಮೆಚ್ಚಿಗೆಯಾಗಿರುವದನ್ನು ಅವನು ನೋಡಿದ್ದರಿಂದ ಪೇತ್ರನನ್ನು ಹಿಡಿಯುವದಕ್ಕಾಗಿ ಮುಂಗೊಂಡನು. (ಆಗ ಅವು ಹುಳಿಯಿಲ್ಲದ ರೊಟ್ಟಿಯ ದಿವಸಗಳಾಗಿದ್ದವು).
- 4 ಹೀಗೆ ಪಸ್ಕದ ತರುವಾಯ ಜನರ ಮುಂದೆ ತರಬೇಕೆಂಬ ಉದ್ದೇಶ ದಿಂದ ಅವನನ್ನು ಬಂಧಿಸಿ ಸೆರೆಯಲ್ಲಿ ಹಾಕಿಸಿದನು.ಅವನನ್ನು ಕಾಯುವದಕ್ಕಾಗಿ ನಾಲ್ಕು ಚತುಷ್ಟದ ಸೈನಿಕರಿಗೆ ಒಪ್ಪಿಸಿದನು.
- 5 ಪೇತ್ರನು ಸೆರೆಯಲ್ಲಿದ್ದಾಗ ಸಭೆಯವರು ಅವನಿಗಾಗಿ ದೇವರಿಗೆ ಎಡೆಬಿಡದೆ ಪ್ರಾರ್ಥಿಸುತ್ತಿದ್ದರು.
- 6 ಹೆರೋದನು ಪೇತ್ರನನ್ನು ಹೊರಗೆ ತರಬೇಕೆಂದಿದ್ದ ಅದೇ ರಾತ್ರಿಯಲ್ಲಿ ಅವನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟು ಇಬ್ಬರು ಸೈನಿಕರ ಮಧ್ಯದಲ್ಲಿ ನಿದ್ರೆಮಾಡುತ್ತಿದ್ದನು; ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯು ತ್ತಿದ್ದರು.
- 7 ಆಗ ಇಗೋ, ಕರ್ತನ ದೂತನು ಪೇತ್ರನ ಬಳಿಗೆ ಬಂದಾಗ ಅವನಿದ್ದ ಸೆರೆಮನೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ--ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಂದ ಸರಪಣಿಗಳು ಕಳಚಿಬಿದ್ದವು.
- 8 ಆ ದೂತನು ಅವನಿಗೆ--ನಡುಕಟ್ಟಿಕೊಂಡು ನಿನ್ನ ಕೆರಗಳನ್ನು ಮೆಟ್ಟಿಕೋ ಎಂದು ಹೇಳಲು ಅವನು ಹಾಗೆಯೇ ಮಾಡಿದನು. ಆ ದೂತನು ಅವನಿಗೆ ನಿನ್ನ ಮೇಲಂಗಿ ಯನ್ನು ಹಾಕಿಕೊಂಡು ನನ್ನ ಹಿಂದೆ ಬಾ ಅಂದನು.
- 9 ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ ಅವನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ದರ್ಶನವೆಂದು ನೆನಸಿದನು.
- 10 ಅವನು ಮೊದಲನೆಯ ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು. ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೆ ಆ ದೂತನು ಅವನನ್ನು ಬಿಟ್ಟು ಹೊರಟುಹೋದನು.
- 11 ಆಗ ಪೇತ್ರನು ಎಚ್ಚರವಾಗಿ-- ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯ ಜನರು ನನಗೆ ಮಾಡಬೇಕೆಂದಿದ್ದ ಎಲ್ಲವುಗಳಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಶ್ಚಯವಾಗಿ ತಿಳಿದುಬಂದಿದೆ ಅಂದುಕೊಂಡನು.
- 12 ತರುವಾಯ ಅವನು ಯೋಚನೆ ಮಾಡಿಕೊಂಡು ಮಾರ್ಕನೆನಿಸಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.
- 13 ಪೇತ್ರನು ದ್ವಾರದ ಬಾಗಿಲನ್ನು ತಟ್ಟಿದಾಗ ರೋದೆ ಎಂಬ ಒಬ್ಬ ಹುಡುಗಿಯು ಕೇಳುವದಕ್ಕೆ ಬಂದಳು.
- 14 ಅವಳು ಪೇತ್ರನ ಧ್ವನಿಯನ್ನು ತಿಳಿದಾಗ ಸಂತೋಷದ ನಿಮಿತ್ತದಿಂದಲೇ ಬಾಗಿಲನ್ನು ತೆರೆಯದೆ ಒಳಕ್ಕೆ ಓಡಿಹೋಗಿ--ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆ ಎಂದು ಹೇಳಿದಳು.
- 15 ಅವರು ಅವಳಿಗೆ--ನಿನಗೆ ಹುಚ್ಚು ಹಿಡಿದದೆ ಎಂದು ಹೇಳಿದರು. ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳಿದ್ದಕ್ಕೆ ಅವರು--ಅವನು ಪೇತ್ರನ ದೂತನು ಅಂದರು.
- 16 ಅಷ್ಟರಲ್ಲಿ ಪೇತ್ರನು ಇನ್ನೂ ತಟ್ಟುತ್ತಾ ಇರಲು ಅವರು ಬಾಗಿಲನ್ನು ತೆರೆದು ಅವನನ್ನು ಕಂಡು ಬೆರಗಾದರು.
- 17 ಅವನು ಸುಮ್ಮನಿರ್ರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರಕೊಂಡು ಬಂದ ರೀತಿಯನ್ನು ವಿವರಿಸಿ ಈ ಸಂಗತಿಗಳನ್ನು ಯಾಕೋಬನಿಗೂ ಸಹೋದರ ರಿಗೂ ತಿಳಿಸಿರೆಂದು ಹೇಳಿ ಬೇರೆ ಸ್ಥಳಕ್ಕೆ ಹೊರಟು ಹೋದನು.
- 18 ಬೆಳಗಾದ ಮೇಲೆ ಪೇತ್ರನು ಏನಾದ ನೆಂದು ಸೈನಿಕರಲ್ಲಿ ಬಹಳ ಕಳವಳ ಉಂಟಾಯಿತು.
- 19 ಹೆರೋದನು ಅವನನ್ನು ಹುಡುಕಿಸಿ ಅವನು ಸಿಕ್ಕಲಿಲ್ಲವಾದದರಿಂದ ಕಾವಲುಗಾರರನ್ನು ವಿಚಾರಣೆ ಮಾಡಿ ಅವರಿಗೆ ಮರಣ ದಂಡನೆಯನ್ನು ವಿಧಿಸಿದನು. ಬಳಿಕ ಅವನು ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಇದ್ದನು.
- 20 ತೂರ್ ಸೀದೋನ್ ಪಟ್ಟಣಗಳವರು ತಮ್ಮ ಮೇಲೆ ಹೆರೋದನು ಬಹಳವಾಗಿ ಕೋಪಿಸಿ ಕೊಂಡಿರುವದರಿಂದ ಅವರು ಒಮ್ಮನಸ್ಸಿನಿಂದ ಅವನ ಬಳಿಗೆ ಬಂದು ಅರಸನ ಮನೆಯ ಮೇಲಣ ಅಧಿಕಾರಿಯಾದ ಬ್ಲಾಸ್ತನನ್ನು ತಮ್ಮ ಸ್ನೇಹಿತನನ್ನಾಗಿ ಮಾಡಿಕೊಂಡು ಅರಸನು ಸಮಾಧಾನವಾಗಬೇಕೆಂದು ಅಪೇಕ್ಷೆಪಟ್ಟರು. ಯಾ
- 21 ಗೊತ್ತು ಮಾಡಿದ ಒಂದು ದಿನದಲ್ಲಿ ಹೆರೋದನು ರಾಜವಸ್ತ್ರವನ್ನು ಧರಿಸಿದವನಾಗಿ ತನ್ನ ಸಿಂಹಾಸನದ ಮೇಲೆ ಕೂತುಕೊಂಡು ಅವರಿಗೆ ಉಪನ್ಯಾಸ ಮಾಡಿ ದನು.
- 22 ಆಗ ಜನರು--ಇದು ಮನುಷ್ಯನ ಸ್ವರವಲ್ಲ , ದೇವರ ಸ್ವರವೇ ಎಂದು ಅರ್ಭಟಿಸಿದರು.
- 23 ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.
- 24 ಆದರೆ ದೇವರ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು.
- 25 ಬಾರ್ನಬ ಸೌಲರು ತಮ್ಮ ಸೇವೆ ತೀರಿಸಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನ ನನ್ನು ಕರಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು.
Acts 12
- Details
- Parent Category: New Testament
- Category: Acts
ಅಪೊಸ್ತಲರ ಕೃತ್ಯಗ ಅಧ್ಯಾಯ 12