- 1 ತರುವಾಯ ನೂತನಾಕಾಶವನ್ನೂ ನೂತನ ಭೂಮಿಯನ್ನೂ ನಾನು ಕಂಡೆನು. ಮೊದ ಲಿನ ಆಕಾಶವೂ ಮೊದಲಿನ ಭೂಮಿಯೂ ಗತಿಸಿ ಹೋದವು; ಇನ್ನು ಸಮುದ್ರವಿರುವದೇ ಇಲ್ಲ.
- 2 ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವದನ್ನು ಯೋಹಾನನೆಂಬ ನಾನು ಕಂಡೆನು; ಅದು ತನ್ನ ಮದಲಿಂಗನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಸಿದ್ಧವಾಗಿತ್ತು.
- 3 ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ
- 4 ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣ ವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವದೇ ಇಲ್ಲ. ಮೊದಲಿದ್ದವುಗಳೆಲ್ಲಾ ಇಲ್ಲದೆ ಹೋದವು ಎಂದು ಹೇಳಿತು.
- 5 ಆಗ ಸಿಂಹಾಸ ನದ ಮೇಲೆ ಕೂತಿದ್ದಾತನು--ಇಗೋ, ಎಲ್ಲವನ್ನು ನಾನು ಹೊಸದು ಮಾಡುತ್ತೇನೆ ಅಂದನು. ಆತನು ನನಗೆ--ಈ ಮಾತುಗಳು ಸತ್ಯವಾದವುಗಳು ನಂಬ ತಕ್ಕವುಗಳೂ ಆಗಿವೆ ಎಂಬದಾಗಿ ಬರೆ ಎಂದು ನನಗೆ ಹೇಳಿದನು.
- 6 ಇದಲ್ಲದೆ ಆತನು ನನಗೆ--ಎಲ್ಲಾ ಮುಗಿಯಿತು. ನಾನು ಅಲ್ಫಾವೂ ಓಮೆಗವೂ ಆದಿಯೂ ಅಂತ್ಯವೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವದ ನೀರಿನ ಬುಗ್ಗೆಯಿಂದ ನಾನು ನೀರನ್ನು ಉಚಿತವಾಗಿ ಕೊಡುವೆನು.
- 7 ಜಯಹೊಂದುವವನು ಎಲ್ಲವುಗಳಿಗೆ ಬಾಧ್ಯನಾಗುವನು; ನಾನು ಅವನ ದೇವರಾಗಿರುವೆನು. ಅವನು ನನ್ನ ಮಗನಾಗಿರುವನು.
- 8 ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- 9 ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ--ಇಲ್ಲಿಗೆ ಬಾ, ಕುರಿಮರಿಯಾದಾತನಿಗೆ ಹೆಂಡತಿಯಾಗ ತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿದನು.
- 10 ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ ಪರಲೋಕ ದೊಳಗಿಂದ ಪರಿಶುದ್ಧವಾದ ಯೆರೂಸಲೇಮೆಂಬ ಆ ದೊಡ್ಡ ಪಟ್ಟಣವು ದೇವರ ಕಡೆಯಿಂದ ಇಳಿದು ಬರುವ ದನ್ನು ನನಗೆ ತೋರಿಸಿದನು.
- 11 ಅದರಲ್ಲಿ ದೇವರ ಮಹಿಮೆ ಇತ್ತು; ಪಟ್ಟಣದ ಪ್ರಕಾಶವು ಅಮೂಲ್ಯವಾದ ಕಲ್ಲಿನ ಪ್ರಕಾಶಕ್ಕೆ ಸಮಾನವಾಗಿತ್ತು; ಅದು ಸೂರ್ಯ ಕಾಂತದಂತೆ ಥಳಥಳಿಸುತ್ತಿತ್ತು.
- 12 ಆ ಪಟ್ಟಣಕ್ಕೆ ಬಹಳ ಎತ್ತರವಾದ ಗೋಡೆ ಇತ್ತು; ಅದಕ್ಕೆ ಹನ್ನೆರಡು ಹೆಬ್ಬಾಗಿಲು ಗಳಿದ್ದವು; ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೂತರಿದ್ದರು; ಅವುಗಳ ಮೇಲೆ ಇಸ್ರಾ ಯೇಲ್ಯರ ಹನ್ನೆರಡು ಗೋತ್ರಗಳ ಹೆಸರುಗಳು ಬರೆ ದಿದ್ದವು.
- 13 ಪೂರ್ವ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲು ಗಳು. ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು.
- 14 ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು; ಅವುಗಳ ಮೇಲೆ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.
- 15 ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಗೋಡೆಯನ್ನೂ ಅಳತೆ ಮಾಡು ವದಕ್ಕಾಗಿ ಚಿನ್ನದ ಅಳತೆ ಕೋಲನ್ನು ಹಿಡಿದಿದ್ದನು.
- 16 ಪಟ್ಟಣವು ಚಚ್ಚೌಕವಾಗಿದೆ; ಅದರ ಉದ್ದವು ಅದರ ಅಗಲದಷ್ಟಿದೆ. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು; ಅಳತೆಯು ಹನ್ನೆರಡು ನೂರು ಮೈಲಿ ಆಯಿತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿವೆ.
- 17 ಅದರ ಗೋಡೆಯನ್ನು ಅವನು ಅಳತೆ ಮಾಡಿದನು; ಅದು ನೂರನಾಲ್ವತ್ತ ನಾಲ್ಕು ಮೊಳ ದಷ್ಟಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಅಂದರೆ ದೂತನ ಮೊಳ.
- 18 ಆ ಗೋಡೆಯ ಕಟ್ಟಡವು ಸೂರ್ಯ ಕಾಂತದಿಂದ ಆಗಿತ್ತು; ಪಟ್ಟಣವು ಶುದ್ಧ ಗಾಜಿನಂತಿರುವ ಸೋಸಿದ ಭಂಗಾರವೇ.
- 19 ಪಟ್ಟಣದ ಗೋಡೆಯ ಅಸ್ತಿವಾರಗಳು ಸಕಲವಿಧವಾದ ಅಮೂಲ್ಯವಾದ ಕಲ್ಲುಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿ ವಾರವು ಸೂರ್ಯಕಾಂತ, ಎರಡನೆಯದು ನೀಲಮಣಿ, ಮೂರನೆಯದು ಕೆಂಪು, ನಾಲ್ಕನೆಯದು ಪಚ್ಚೆ.
- 20 ಐದನೆಯದು ಗೋಮೇಧಿಕ. ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಕೆಂಗಿತ್ತಳೆ, ಹನ್ನೆರಡನೆ ಯದು ನೀಲಸ್ಪಟಿಕ.
- 21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು; ಒಂದೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಸೋಸಿದ ಬಂಗಾರವಾಗಿತ್ತು.
- 22 ಪಟ್ಟಣದಲ್ಲಿ ನಾನು ಆಲಯವನ್ನು ಕಾಣಲಿಲ್ಲ; ಯಾಕಂದರೆ ಸರ್ವಶಕ್ತನಾದ ದೇವರಾಗಿ ರುವ ಕರ್ತನೂ ಕುರಿಮರಿಯಾದಾತನೂ ಅದರ ಆಲಯವಾಗಿದ್ದಾರೆ.
- 23 ಪಟ್ಟಣದಲ್ಲಿ ಬೆಳಕನ್ನು ಕೊಡು ವದಕ್ಕಾಗಿ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿಲ್ಲ. ಯಾಕಂದರೆ ಅದಕ್ಕೆ ದೇವರ ಪ್ರಭಾವವೇ ಬೆಳಕನ್ನು ಕೊಟ್ಟಿತು; ಕುರಿಮರಿಯಾದಾತನೇ ಅದರ ದೀಪ.
- 24 ರಕ್ಷಿಸಲ್ಪಟ್ಟ ಜನಾಂಗದವರು ಅದರ ಬೆಳಕಿನಲಿ ನಡೆಯುವರು; ಭೂರಾಜರು ತಮ್ಮ ವೈಭವವನ್ನೂ ಘನವನ್ನೂ ಅಲ್ಲಿಗೆ ತರುವರು.
- 25 ಅದರ ಹೆಬ್ಬಾಗಿಲು ಗಳನ್ನು ಹಗಲಿನಲ್ಲಿ ಮುಚ್ಚುವದೇ ಇಲ್ಲ. ಯಾಕಂದರೆ ರಾತ್ರಿಯು ಅಲ್ಲಿಲ್ಲ.
- 26 ಅವರು ಜನಾಂಗಗಳ ವೈಭವ ವನ್ನೂ ಘನವನ್ನೂ ಅಲ್ಲಿಗೆ ತರುವರು.
- 27 ಅದರಲ್ಲಿ ಹೊಲೆ ಮಾಡುವಂಥದ್ದು ಯಾವದೂ ಸೇರುವದಿಲ್ಲ. ಅಸಹ್ಯವಾದದ್ದನ್ನೂ ಸುಳ್ಳಾದದ್ದನ್ನೂ ನಡಿಸುವವನು ಅಲ್ಲಿ ಸೇರುವದಿಲ್ಲ. ಆದರೆ ಕುರಿಮರಿಯಾದಾತನ ಜೀವಗ್ರಂಥದಲ್ಲಿ ಬರೆಯಲ್ಪಟ್ಟವರು ಮಾತ್ರ ಸೇರುವರು.
Revelation 21
- Details
- Parent Category: New Testament
- Category: Revelation
ಪ್ರಕಟನೆ ಅಧ್ಯಾಯ 21