- 1 ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತಕ್ಕೊಂಡಿದ್ದಾನೆ, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ ಎಂದು ಲಾಬಾನನ ಮಕ್ಕಳು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು.
- 2 ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ ಅದು ತನ್ನ ಕಡೆಗೆ ಮೊದಲು ಇದ್ದಹಾಗೆ ಇರಲಿಲ್ಲ.
- 3 ಆಗ ಕರ್ತನು ಯಾಕೋಬನಿಗೆ--ನಿನ್ನ ತಂದೆಗಳ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ಹಿಂತಿರುಗಿ ಹೋಗು, ನಾನು ನಿನ್ನ ಸಂಗಡ ಇರುವೆನು ಅಂದನು.
- 4 ಯಾಕೋಬನು ರಾಹೇಲಳನ್ನೂ ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೇಕಳುಹಿಸಿ
- 5 ಅವರಿಗೆ--ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದಹಾಗೆ ಈಗ ಇಲ್ಲದಿರುವದನ್ನು ನಾನು ನೋಡುತ್ತಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಸಂಗಡ ಇದ್ದನು.
- 6 ನಾನು ಪೂರ್ಣ ಬಲದಿಂದ ನಿಮ್ಮ ತಂದೆಯ ಸೇವೆಮಾಡಿದ್ದು ನಿಮಗೆ ತಿಳಿದಿದೆ.
- 7 ಆದರೆ ನಿಮ್ಮ ತಂದೆಯು ನನಗೆ ವಂಚನೆ ಮಾಡಿ ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿ ದನು. ಆದಾಗ್ಯೂ ದೇವರು ಅವನಿಂದ ನನಗೆ ಕೇಡುಮಾಡಗೊಡಿಸಲಿಲ್ಲ.
- 8 ನಿಮ್ಮ ತಂದೆ ನನಗೆ --ಚುಕ್ಕೆಯುಳ್ಳದ್ದು ನಿನ್ನ ಸಂಬಳವಾಗಿರಲಿ ಅಂದಾಗ ಮಂದೆಯೆಲ್ಲಾ ಚುಕ್ಕೆಯುಳ್ಳದ್ದೇ ಈಯಿತು; ಅವನು --ರೇಖೆಯುಳ್ಳದ್ದು ನಿನ್ನ ಸಂಬಳವಾಗಿರಲಿ ಅಂದಾಗ ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು.
- 9 ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು ಅವುಗಳನ್ನು ನನಗೆ ಕೊಟ್ಟಿದ್ದಾನೆ.
- 10 ಇದಲ್ಲದೆ ಕುರಿಗಳು ಗರ್ಭದರಿಸುವಾಗ ಆದದ್ದೇನೆಂದರೆ ಸ್ವಪ್ನದಲ್ಲಿ ನಾನು ನನ್ನ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಕುರಿ ಗಳ ಮೇಲೆ ಏರುವ ಟಗರುಗಳು ಚುಕ್ಕೆ ಮಚ್ಚೆ ರೇಖೆಗಳುಳ್ಳವುಗಳಾಗಿದ್ದವು.
- 11 ಆಗ ದೇವದೂತನು ಸ್ವಪ್ನದಲ್ಲಿ ನನಗೆ ಯಾಕೋಬನೇ ಅಂದನು. ಅದಕ್ಕೆ ನಾನು--ಇಲ್ಲಿ ಇದ್ದೇನೆ ಅಂದೆನು.
- 12 ಅವನು ನನಗೆ--ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ನೋಡಿದ್ದೇನೆ. ಆದದರಿಂದ ನಿನ್ನ ಕಣ್ಣುಗಳನ್ನೆತ್ತಿ ಕುರಿಗಳ ಮೇಲೆ ಏರುವ ಎಲ್ಲಾ ಟಗರುಗಳನ್ನು ನೋಡು; ಅವು ಚುಕ್ಕೆ ಮಚ್ಚೆ ರೇಖೆಯೂ ಉಳ್ಳವುಗಳಾಗಿವೆ.
- 13 ನೀನು ಸ್ತಂಭವನ್ನು ಅಭಿಷೇಕಿಸಿ ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದೊಳಗಿಂದ ಹೊರಟು ನಿನ್ನ ಬಂಧುಗಳ ದೇಶಕ್ಕೆ ತಿರಿಗಿ ಹೋಗು ಅಂದನು.
- 14 ಆಗ ರಾಹೇಲಳು ಮತ್ತು ಲೇಯಳು ಅವನಿಗೆ--ನಮ್ಮ ತಂದೆಯ ಮನೆಯಲ್ಲಿ ನಮಗೆ ಭಾಗವೂ ಬಾಧ್ಯತೆಯೂ ಇನ್ನೇನದೆ?
- 15 ಅವನು ನಮ್ಮನ್ನು ಅನ್ಯರೆಂದು ಎಣಿಸಿದ್ದಾನಲ್ಲಾ; ಅವನು ನಮ್ಮನ್ನು ಮಾರಿ ನಮ್ಮ ಹಣವನ್ನು ತಾನೇ ನುಂಗಿಬಿಟ್ಟನ್ನಲ್ಲಾ.
- 16 ಆದದರಿಂದ ದೇವರು ನಮ್ಮ ತಂದೆಯಿಂದ ತಕ್ಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು ಅಂದರು.
- 17 ಆಗ ಯಾಕೋಬನು ಎದ್ದು ತನ್ನ ಕುಮಾರರನ್ನೂ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ
- 18 ತನ್ನ ಎಲ್ಲಾ ಪಶುಗಳನ್ನೂ ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶ ದಲ್ಲಿದ್ದ ತನ್ನ ತಂದೆಯಾದ ಇಸಾಕನ ಬಳಿಗೆ ತಕ್ಕೊಂಡು ಹೋದನು.
- 19 ಆಗ ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವದಕೆ ಹೋಗಿದ್ದನು. ಆದದರಿಂದ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
- 20 ಆದರೆ ಯಾಕೋಬನು ತಾನು ಓಡಿ ಹೋಗುವದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ಕಳ್ಳತನದಿಂದ ಹೋದನು.
- 21 ಅವನು ತನಗಿದ್ದದ್ದನ್ನೆಲ್ಲಾ ತೆಗೆದು ಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖನಾಗಿ ನದಿಯನ್ನು ದಾಟಿದನು.
- 22 ಯಾಕೋಬನು ಓಡಿಹೋದನೆಂದು ಮೂರ ನೆಯ ದಿವಸದಲ್ಲಿ ಲಾಬಾನನಿಗೆ ತಿಳಿಸಲ್ಪಟ್ಟಿತು.
- 23 ಆಗ ಅವನು ತನ್ನ ಸಹೋದರರನ್ನು ಕರಕೊಂಡು ಅವನನ್ನು ಬೆನ್ನಟ್ಟಿ ಏಳು ದಿನ ಪ್ರಯಾಣಮಾಡಿ ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
- 24 ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮ್ಯನಾದ ಲಾಬಾನನ ಬಳಿಗೆ ಬಂದು ಅವನಿಗೆ--ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ ಕೆಟ್ಟದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು ಅಂದನು.
- 25 ತರುವಾಯ ಲಾಬಾ ನನು ಯಾಕೋಬನನ್ನು ಸಂಧಿಸಿದಾಗ ಯಾಕೋಬನು ಬೆಟ್ಟದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹೋದರರ ಸಂಗಡ ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು.
- 26 ಲಾಬಾನನು ಯಾಕೋಬನಿಗೆ--ನೀನು ಏನು ಮಾಡಿದಿ? ನನಗೆ ತಿಳಿಸದೆ ನೀನು ಕಳ್ಳನ ಹಾಗೆ ಓಡಿಬಂದಿಯಲ್ಲಾ. ನನ್ನ ಕುಮಾರ್ತೆಯರನ್ನು ಕತ್ತಿಯಿಂದ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಬಂದಿಯಲ್ಲಾ.
- 27 ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಬಂದಿ? ನೀನು ನನಗೆ ಯಾಕೆ ತಿಳಿಸಲಿಲ್ಲ? ತಿಳಿಸಿದ್ದರೆ ಸಂತೋಷದಿಂದ ಹಾಡು ತಾಳ ವೀಣೆಗಳ ಸಂಗಡ ನಿನ್ನನ್ನು ಕಳುಹಿಸುತ್ತಿದ್ದೆನು.
- 28 ಆದರೆ ನೀನು ನನ್ನ ಕುಮಾರರಿಗೂ ಕುಮಾರ್ತೆಯರಿಗೂ ಮುದ್ದು ಕೊಡ ಗೊಡಿಸಲಿಲ್ಲ. ನೀನು ಮಾಡಿದ್ದು ಹುಚ್ಚು ಕೆಲಸವೇ ಸರಿ.
- 29 ನಿನಗೆ ಕೇಡುಮಾಡುವದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ--ನೀನು ಯಾಕೋಬನಿಗೆ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಹೇಳದ ಹಾಗೆ ಎಚ್ಚರಿಕೆಯಾಗಿರು ಎಂದು ಹೇಳಿದನು.
- 30 ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಆಶಿಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ ಅಂದನು.
- 31 ಅದಕ್ಕೆ ಯಾಕೋಬನು ಪ್ರತ್ಯುತ್ತರವಾಗಿ ಲಾಬಾನ ನಿಗೆ--ನೀನು ಒಂದು ವೇಳೆ ನಿನ್ನ ಕುಮಾರ್ತೆಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತಕ್ಕೊಳ್ಳುವಿ ಎಂದು ನಾನು ಅಂದುಕೊಂಡು ಭಯಪಟ್ಟೆನು.
- 32 ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳನ್ನು ಕಂಡುಕೊಳ್ಳುವಿಯೋ ಅವರು ಬದುಕದೆ ಇರಲಿ; ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ ನಮ್ಮ ಸಹೋದರರ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ ಅಂದನು. ಆದರೆ ರಾಹೇಲಳು ಅವುಗಳನ್ನು ಕದ್ದು ಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
- 33 ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಅವುಗಳನ್ನು ಕಂಡು ಕೊಳ್ಳಲಿಲ್ಲ; ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು.
- 34 ಆದರೆ ರಾಹೇಲಳು ವಿಗ್ರಹಗಳನ್ನು ತಕ್ಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು ಅದರ ಮೇಲೆ ಕೂತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದಾಗ್ಯೂ ಅವನು ಅವುಗಳನ್ನು ಕಂಡುಕೊಳ್ಳಲಿಲ್ಲ.
- 35 ರಾಹೇಲಳು ತನ್ನ ತಂದೆಗೆ--ನಾನು ನಿನ್ನ ಮುಂದೆ ಏಳಲಾರದೆ ಇರುವದರಿಂದ ನನ್ನ ಪ್ರಭುವೇ, ನಿನಗೆ ಕೋಪಬಾರದೆ ಇರಲಿ. ಯಾಕಂದರೆ ಸ್ತ್ರೀಯರ ಕ್ರಮ ನನಗೆ ಆಗಿದೆ ಅಂದಳು. ಅವನು ಆ ವಿಗ್ರಹಗಳನ್ನು ಹುಡುಕಿ ಕಂಡುಕೊಳ್ಳದೆ ಹೋದನು.
- 36 ಆಗ ಯಾಕೋಬನು ಕೋಪಗೊಂಡು ಲಾಬಾ ನನ ಕೂಡ ವಾದಿಸಿದನು. ಯಾಕೋಬನು ಪ್ರತ್ಯುತ್ತರ ವಾಗಿ ಲಾಬಾನನಿಗೆ--ನೀನು ನನ್ನನ್ನು ಬೆನ್ನಟ್ಟಿ ಬರು ವದಕ್ಕೆ ನನ್ನ ಅಪರಾಧವೇನು? ನನ್ನ ಪಾಪವೇನು?
- 37 ನೀನು ನನ್ನ ಸಾಮಾನುಗಳನ್ನೆಲ್ಲಾ ಹುಡಿಕಿದ ಮೇಲೆ ನಿನ್ನ ಮನೆಯ ಸಾಮಾನುಗಳಲ್ಲಿ ಏನು ಕಂಡುಕೊಂಡಿ? ನನಗೂ ನಿನಗೂ ಸಹೋದರರಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.
- 38 ಈ ಇಪ್ಪತ್ತು ವರುಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ ಮೇಕೆಗಳೂ ಕಂದು ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ.
- 39 ಮೃಗಗಳಿಂದ ಕೊಲ್ಲಲ್ಪಟ್ಟವುಗಳನ್ನು ನಿನ್ನ ಬಳಿಗೆ ತಾರದೆ ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡಿ.
- 40 ಹಗಲಲ್ಲಿ ಬಿಸಿಲಿ ನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನಿದ್ರೆ ನನ್ನ ಕಣ್ಣುಗಳಿಗೆ ತಪ್ಪಿಹೋಯಿತು, ಈ ಸ್ಥಿತಿಯಲ್ಲಿ ನಾನಿದ್ದೆನು.
- 41 ನಿನ್ನ ಇಬ್ಬರು ಕುಮಾರ್ತೆಯರಿಗಾಗಿ ಹದಿನಾಲ್ಕು ವರುಷ, ನಿನ್ನ ಮಂದೆಗಳಿಗೋಸ್ಕರ ಆರು ವರುಷ, ಈ ಪ್ರಕಾರ ಇಪ್ಪತ್ತು ವರುಷ ನಿನ್ನ ಮನೆಯಲ್ಲಿ ಇದ್ದು ಸೇವೆಮಾಡಿದೆನು; ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದಿ.
- 42 ಅಬ್ರಹಾಮನ ದೇವರೂ ನನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ ನಿಜವಾಗಿಯೂ ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದಿ; ನನ್ನ ಬಾಧೆ ಯನ್ನೂ ನನ್ನ ಕೈ ಕಷ್ಟವನ್ನೂ ದೇವರು ನೋಡಿ ನಿನ್ನೆ ರಾತ್ರಿ ನಿನ್ನನ್ನು ಗದರಿಸಿದನು ಅಂದನು.
- 43 ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ --ಈ ಕುಮಾರ್ತೆಯರು ನನ್ನ ಕುಮಾರ್ತೆಯರೇ; ಈ ಮಕ್ಕಳೂ ನನ್ನ ಮಕ್ಕಳೇ; ಈ ಮಂದೆಯೂ ನನ್ನ ಮಂದೆಯೇ; ಅಂತೂ ನೀನು ನೋಡುವದೆಲ್ಲಾ ನನ್ನದೇ. ಹಾಗಾದರೆ ನನ್ನ ಕುಮಾರ್ತೆಯರಿಗಾಗಲಿ ಅವರು ಹೆತ್ತ ಮಕ್ಕಳಿಗಾಗಲಿ ನಾನು ಈಹೊತ್ತು ಏನು ಮಾಡಲಿ?
- 44 ಆದದರಿಂದ ನೀನು ಈಗ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ; ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದನು.
- 45 ಆಗ ಯಾಕೋಬನು ಒಂದು ಕಲ್ಲನ್ನು ತೆಗೆದು ಕೊಂಡು ಸ್ತಂಭವಾಗಿ ನಿಲ್ಲಿಸಿದನು;
- 46 ಯಾಕೋಬನು ತನ್ನ ಸಹೋದರರಿಗೆ (ಕಡೆಯವರಿಗೆ)--ಕಲ್ಲುಗಳನ್ನು ಕೂಡಿಸಿರಿ ಅಂದನು. ಅವರು ಕಲ್ಲುಗಳನ್ನು ತಕ್ಕೊಂಡು ಒಂದು ಕುಪ್ಪೆ ಮಾಡಿ ಆ ಕುಪ್ಪೆಯ ಮೇಲೆ ಅವರು ಊಟಮಾಡಿದರು.
- 47 ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು; ಯಾಕೋ ಬನು ಗಲೇದ್ ಎಂದೂ ಹೆಸರಿಟ್ಟನು;
- 48 ಆಗ ಲಾಬಾನನು--ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ ಅಂದನು. ಆದದರಿಂದ ಅದಕ್ಕೆ ಗಲೇದ್ ಎಂದೂ
- 49 ಮಿಚ್ಪಾ ಎಂದೂ ಹೆಸರಾಯಿತು. ಯಾಕಂದರೆ--ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಕರ್ತನು ನಮ್ಮನ್ನು ಕಾಪಾಡಲಿ.
- 50 ನೀನು ನನ್ನ ಕುಮಾರ್ತೆಯರನ್ನು ಉಪದ್ರಪಡಿಸಿದರೆ ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ತಕ್ಕೊಂಡರೆ ಯಾವ ಮನುಷ್ಯನೂ ನಮ್ಮ ಸಂಗಡ ಇರುವದಿಲ್ಲ. ನೋಡು, ನನಗೂ ನಿನಗೂ ನಡುವೆ ದೇವರೇ ಸಾಕ್ಷಿ ಅಂದನು.
- 51 ಲಾಬಾನನು ಯಾಕೋಬ ನಿಗೆ--ನಿನಗೂ ನನಗೂ ಮಧ್ಯೆ ನಾನು ಹಾಕಿಸಿರುವ ಈ ಕುಪ್ಪೆಯನ್ನು ನೋಡು, ಈ ಸ್ತಂಭವನ್ನು ನೋಡು.
- 52 ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವದಿಲ್ಲವೆಂಬದಕ್ಕೆ ಈ ಕುಪ್ಪೆಯೂ ಸ್ತಂಭವೂ ಸಾಕ್ಷಿಯಾಗಿವೆ.
- 53 ಅಬ್ರಹಾ ಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯ ತೀರಿಸಲಿ ಅಂದನು. ಆಗ ಯಾಕೋಬನು ತನ್ನ ತಂದೆಯಾದ ಇಸಾಕನು ಭಯದಿಂದ ಸೇವಿಸುವ ದೇವರ ಮೇಲೆ ಪ್ರಮಾಣಮಾಡಿದನು.
- 54 ಯಾಕೋ ಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ ರೊಟ್ಟಿ ಯನ್ನು ತಿನ್ನುವದಕ್ಕೆ ತನ್ನ ಸಹೋದರರನ್ನು ಕರೇ ಕಳುಹಿಸಿದನು. ಅವರು ರೊಟ್ಟಿಯನ್ನು ತಿಂದು ಬೆಟ್ಟದಲ್ಲಿಯೇ ರಾತ್ರಿ ಇಳುಕೊಂಡರು.
- 55 ಹೊತ್ತಾರೆ ಲಾಬಾನನು ಎದ್ದು ತನ್ನ ಕುಮಾರರಿಗೂ ಕುಮಾರ್ತೆ ಯರಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.
Genesis 31
- Details
- Parent Category: Old Testament
- Category: Genesis
ಆದಿಕಾಂಡ ಅಧ್ಯಾಯ 31